ಕನಕಪುರ: ರೈತರ ಬೆಳೆಗೆ ನೀರು ಹಾಯಿಸದೆ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿಸುತ್ತಿರುವ ಅಧಿಕಾರಗಳ ನಡೆ ಖಂಡನೀಯ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾರೋಬೆಲೆ ಜಲಾಶಯದಿಂದ ಚುಂಚಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ದಿನನಿತ್ಯ ನೂರಾರು ಕ್ಯೂಸೆಕ್ ನೀರು ಹರಿಸುತ್ತಿರುವ ಅಧಿಕಾರಿಗಳು, ಅಣೆಕಟ್ಟು ಕಟ್ಟಲು ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಜಾಗ ಕೊಟ್ಟ ರೈತರ ಭೂಮಿಗೆ ನೀರು ಹರಿಸದೆ ದ್ರೋಹ ಮಾಡುತ್ತಿದ್ದು, ಹಾರೋಬೆಲೆ ಜಲಾಶಯದ ಎಂಜಿನಿಯರ್ ಕಚೇರಿಗೆ ರೈತರು ಒಗ್ಗೂಡಿ ಮುತ್ತಿಗೆ ಹಾಕಲು ತೀರ್ಮಾನಿಸಿರುವುದಾಗಿ ತಿಳಿಸಿದರು.ನೀರಾವರಿ ಅಧಿಕಾರಿಗಳಿಗೆ ಹಣ ಮಾಡುವ ವಿದ್ಯುತ್ ಉತ್ಪಾದನಾ ಘಟಕದ ಮಾಲೀಕ ಹೆಚ್ಚೋ ಅಥವಾ ಭೂಮಿಕೊಟ್ಟ ರೈತ ಹೆಚ್ಚೋ ಎಂಬುದನ್ನು ಮೊದಲು ತಿಳಿಸಬೇಕಾಗಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇದರ ಕಡೆಗೆ ಗಮನ ಹರಿಸಿ ಮಲತಾಯಿ ಧೋರಣೆ ತೋರುತ್ತಿರುವ ಹಾರೋಬೆಲೆ ಜಲಾಶಯದ ಎಂಜಿನಿಯರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ನಲ್ಲಹಳ್ಳಿ, ಏಳಗಳ್ಳಿ, ಒಡಕೆಕಟ್ಟೆ, ಹಾರೋಶಿವನಹಳ್ಳಿ, ನಲ್ಲಹಳ್ಳಿದೊಡ್ಡಿ, ಚುಂಚಿ ಕಾಲೋನಿ, ಬೆಂಡಗೋಡು, ಹೆಗ್ಗನೂರು ಗ್ರಾಮಗಳ ರೈತರ ನೂರಾರು ಕೊಳವೆಬಾವಿಗಳು ಬತ್ತಿಹೋಗಿದ್ದು ಇದಕ್ಕೆ ನೇರ ಕಾರಣ ನಾಲೆಗಳಿಗೆ ನೀರುಬಿಡದೆ ದರ್ಪ ತೋರುತ್ತಿರುವ ಎಂಜಿನಿಯರ್ ವರ್ತನೆಯೇ ಕಾರಣವಾಗಿದೆ. ಒಂದು ವಾರದೊಳಗೆ ಅಮಾನತು ಮಾಡಿ ರೈತರ ನಾಲೆಗಳಿಗೆ ನೀರು ಕೊಡದೆ ಇದ್ದರೆ ರಾಜ್ಯ ರೈತಸಂಘ ಜಯ ಕರ್ನಾಟಕ ಜನಪರ ವೇದಿಕೆ ಆ ಭಾಗದ ರೈತರ ಜೊತೆಗೂಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸಿದರು.ರೈತಸಂಘ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಚುಂಚಿ ಜಲವಿದ್ಯುತ್ ನಿರ್ಮಾಣಕ್ಕೆ ಜಾಗ ಕೊಟ್ಟಿರುವ ರೈತರಿಗೆ ಪರಿಹಾರ ಕೊಡುವ ಸಂದರ್ಭದಲ್ಲಿ ಅನ್ಯಾಯವಾಗಿದ್ದು, ನೈಜ ಫಲಾನುಭವಿಗಳಿಗೆ ಪರಿಹಾರ ಕೊಡದೆ ರಾಜಕೀಯ ಮುಖಂಡರ ಹಿಂಬಾಲಕರಿಗೆ ಕೊಟ್ಟಿರುವ ಉದಾಹರಣೆಗಳಿವೆ. ಈ ಬಗ್ಗೆ ಸ್ಥಳೀಯ ರೈತರ ಜೊತೆ ಚರ್ಚಿಸಿ ಶೀಘ್ರವೇ ವಿದ್ಯುತ್ ಉತ್ಪಾದನಾ ಜಲಾಶಯದ ಮಾಲೀಕರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದೆಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ನೂತನ ತಾಲೂಕು ಅಧ್ಯಕ್ಷ ಪುಟ್ಟಮಾದೇಗೌಡ, ಕಾರ್ಯದರ್ಶಿ ನಲ್ಲಹಳ್ಳಿ ಶಿವಲಿಂಗ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಶಿವರಾಜು, ಜಿಲ್ಲಾ ಕಾರ್ಯದರ್ಶಿ ಕುಮಾರ್, ಮುಖಂಡರಾದ ಮಲ್ಲಯ್ಯ, ರಾಜು, ಉಮೇಶ, ಗಿರೀಶ್, ಸುಂದರ್, ವೆಂಕಟೇಶ್ ಇತರರು ಹಾಜರಿದ್ದರು.