ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು 7 ದಶಕಗಳ ನಂತರ ಇದೇ ಮೊದಲ ಬಾರಿಗೆ ಕೇಂದ್ರೀಯ ತಳಿಗಳ ಬಿಡುಗಡೆ ಸಮಿತಿ (ಸೆಂಟ್ರಲ್ ವೆರೈಟಿ ರಿಲೀಸ್ ಕಮಿಟಿ)ಯ ವತಿಯಿಂದ ತಂಬಾಕಿನ ನೂತನವಾಗಿ ಆವಿಷ್ಕಾರಗೊಂಡ ತಳಿಗಳ ಬಿಡುಗಡೆಯಾಗಿದ್ದು, ಆ ಮೂಲಕ ತಂಬಾಕು ಕೃಷಿಗೆ ಸರ್ಕಾರಗಳ ಅಧಿಕೃತ ಮನ್ನಣೆ ದೊರಕಿದಂತಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ (ಐಸಿಎಆರ್) ನ ಉಪ ಮಹಾನಿರ್ದೇಶಕ ಡಾ.ಟಿ.ಆರ್. ಶರ್ಮಾ ಹೇಳಿದರು.ಪಟ್ಟಣದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಆವರಣದಲ್ಲಿ ಗುರುವಾರ ಐಸಿಎಆರ್-ಸಿಟಿಆರ್ಐ ಸಹಯೋಗದಲ್ಲಿ ಆಯೋಜಿಸಿದ್ದ 13ನೇ ವಾರ್ಷಿಕ ಆಲ್ ಇಂಡಿಯಾ ನೆಟ್ವರ್ಕ್ ಪ್ರಾಜೆಕ್ಟ್ ಆನ್ ಟೊಬ್ಯಾಕೋ ಕುರಿತಾಗಿನ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಶಕಗಳ ಕಾಲ ತಂಬಾಕು ಕುರಿತಂತೆ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯದ ಕಾರಣದಿಂದಾಗಿ ನಕಾರಾತ್ಮಕ ಸಂದೇಶಗಳಿಂದಲೇ ತಂಬಾಕು ಕೃಷಿ ಕುಂಟುತ್ತಾ ಎಡವುತ್ತಲೇ ಸಾಗಿ ಬಂದಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಂಬಾಕು ಕೃಷಿ ಪ್ರಮುಖವಾದುದಾಗಿದ್ದು, ತಂಬಾಕು ಕೃಷಿಯಿಂದ ಸರ್ಕಾರಕ್ಕೆ 45 ಸಾವಿರ ಕೋಟಿ ರು.ಗಳ ಆದಾಯ ಗಳಿಸುತ್ತಿದೆ. ಮಾತ್ರವಲ್ಲದೇ ತಂಬಾಕು ಕೃಷಿಯನ್ನು ದೇಶಾದ್ಯಂತ 45.7 ಮಿಲಿಯನ್ ರೈತ ಕುಟುಂಬಗಳು ಅವಲಂಬಿಸಿದೆ ಎಂದರು.ಮುಖ್ಯಅತಿಥಿಯಾಗಿ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಸಿಟಿಆರ್ಐ ವಿಜ್ಞಾನಿಗಳು ರೈತರ ಆರ್ಥಿಕ ಸದೃಢತೆಗಾಗಿ ನೂತನ ಆವಿಷ್ಕಾರಗಳೊಂದಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದ್ದಾರೆ. ಆದರೆ ಅವರ ಆವಿಷ್ಕಾರಗಳು ರೈತರವರೆಗೆ ತಲುಪುವತ್ತ ಪರಿಣಾಮಕಾರಿಯಾಗಿ ಆಗಬೇಕಿದೆ. ಈ ನಡುವೆ 2020ರ ನಂತರ ತಂಬಾಕು ಬೆಳೆ ನಿಷೇಧವೆಂಬ ಕೂಗು ಇಂದಿಗೂ ರೈತರಲ್ಲಿ ಮುಂದುವೆರೆದಿದ್ದು, ಈ ಗೊಂದಲಗಳಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತನಾಡಿ, ರೈತರಿಗೆ ಮಾಹಿತಿ ನೀಡಬೇಕು. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಈ ಕುರಿತು ಒಡಂಬಡಿಕೆಯಾಗಿದೆ ಎನ್ನುವ ಮಾತುಗಳು ಇಂದಿಗೂ ಮುಂದುವೆರೆದಿದ್ದು, ರೈತರನ್ನು ಗೊಂದಲದ ಮನಸ್ಥಿತಿಗೆ ತಂದಿದೆ ಎಂದರು.ಈ ವೇಳೆ ಮಧ್ಯೆಪ್ರವೇಶಿಸಿದ ಸಿಟಿಆರ್.ಐ ನಿರ್ದೇಶಕ ಡಾ. ಶೇಷುಮಾಧವ್ ತಂಬಾಕು ಬೆಳೆ ನಿಷೇಧವೆಂಬ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ. ಬದಲಾಗಿ ಪ್ರಮಾಣ ನಿಯಂತ್ರಣ ಕುರಿತು ಸಾಕಷ್ಟು ನಿರ್ಧಾರಗಳನ್ನು ಕೈಗೊಂಡಿದೆ ಎಂದು ಸಮಜಾಯಿಷಿ ನೀಡಿದರು. ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ತೋಟಗಾರಿಕೆ ಮತ್ತು ಕೃಷಿ ವಿವಿಯ ಉಪಕುಲಪತಿ ಡಾ.ಆರ್.ಸಿ. ಜಗದೀಶ್, ತಂಬಾಕು ಕೃಷಿಗೆ ಅನುಕೂಲಕರ ಭೂಮಿಯನ್ನು ಈ ಭಾಗ ಹೊಂದಿದ್ದು, ಗುಣಮಟ್ಟದ ಇಳುವರಿ ಪಡೆಯಲು ವಿಜ್ಞಾನಿಗಳ ಪ್ರಯತ್ನ ಸತತವಾಗಿ ಆಗಿದೆ ಎಂದರು.ಐಸಿಎಆರ್ನ ಎಡಿಜಿ ಪ್ರಸಂತ ಕೆ. ದಾಶ್ ಮಾತನಾಡಿ, ತಂಬಾಕು ಕೃಷಿಯಲ್ಲಿನ ಕೆಲ ಅನಾನುಕೂಲತೆಗಳಿಗೆ ರೈತರು ನಿರಾಶರಾಗಬಾರದು. ಅವುಗಳಿಂದ ಹೊರಬರಲು ವಿಜ್ಞಾನಿಗಳು ನೂತನ ಅವಿಷ್ಕಾರಗಳನ್ನು ನಡೆಸುತ್ತಿದ್ದು, ಸಾಧಿಸುವ ಛಲದೊಂದಿಗೆ ಮುಂದುವರೆಯೋಣವೆಂದರು.ಸಿಟಿಆರ್ಐ ರಾಜಮಂಡ್ರಿಯ ನಿರ್ದೇಶಕ ಡಾ.ಎಂ.ಶೇಷು ಮಾಧವ್ ಮಾತನಾಡಿದರು.ನೋಡಲ್ ಅಧಿಕಾರಿ ಡಾ.ಕೆ. ಸರಳ, ಹುಣಸೂರು ಸಿಟಿಆರ್.ಐ ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್, ತಂಬಾಕು ಮಂಡಳಿ ಸದಸ್ಯ ಬಸವರಾಜು, ವಿಕ್ರಂ ರಾಜ್ ಅರಸ್, ದಿನೇಶ್ ಹಬ್ಬನಕುಪ್ಪೆ ಸೇರಿದಂತೆ ದೇಶಾದ್ಯಂತ 30ಕ್ಕೂ ಹೆಚ್ಚು ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.ತಂಬಾಕು ಬೆಳೆಯಲ್ಲಿನ ಬೆಳೆ ಉತ್ಪಾದನೆ, ರಕ್ಷಣೆ, ಇಳುವರಿ ಹೆಚ್ಚಳ, ಮುಂತಾದವುಗಳ ಕುರಿತು ಚರ್ಚಿಸಲಾಯಿತು. ನೂತನ ತಂತ್ರಜ್ಞಾನಗಳ ಕುರಿತಾಗಿ ವಿಜ್ಞಾನಿಗಳು ಬರೆದ 5ಕ್ಕೂ ಹೆಚ್ಚು ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.