ನೆಮ್ಮದಿಯ ಜೀವನಕ್ಕೆ ಧರ್ಮವು ಬಹುದೊಡ್ಡ ಅಸ್ತ್ರ

| Published : May 02 2025, 12:14 AM IST

ಸಾರಾಂಶ

ಮಾನವನ ನೆಮ್ಮದಿಯ ಜೀವನಕ್ಕೆ, ಜೀವನ ಸುಧಾರಣೆಗೆ ಧರ್ಮ ಬಹುದೊಡ್ಡ ಅಸ್ತ್ರವಾಗಿದ್ದು, ಶಾಂತಿ ಮತ್ತು ಅಹಿಂಸಾ ಬೋಧನೆಗಳು ಅತಿ ಅಗತ್ಯವಾಗಿವೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು, ಕರ್ನಾಟಕ ಜೈನ ಅಸೋಸಿಯೇಷನ್ ಸಹ ಕಾರ್ಯದರ್ಶಿಗಳು, ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಅಧ್ಯಕ್ಷರು ಹಾಗೂ ರತ್ನತ್ರೆಯ ಕ್ರಿಯೇಷನ್ ನಿರ್ದೇಶಕರಾದ ಡಾ.ನೀರಜಾ ನಾಗೇಂದ್ರಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಗಪುರ

ಮಾನವನ ನೆಮ್ಮದಿಯ ಜೀವನಕ್ಕೆ, ಜೀವನ ಸುಧಾರಣೆಗೆ ಧರ್ಮ ಬಹುದೊಡ್ಡ ಅಸ್ತ್ರವಾಗಿದ್ದು, ಶಾಂತಿ ಮತ್ತು ಅಹಿಂಸಾ ಬೋಧನೆಗಳು ಅತಿ ಅಗತ್ಯವಾಗಿವೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು, ಕರ್ನಾಟಕ ಜೈನ ಅಸೋಸಿಯೇಷನ್ ಸಹ ಕಾರ್ಯದರ್ಶಿಗಳು, ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಅಧ್ಯಕ್ಷರು ಹಾಗೂ ರತ್ನತ್ರೆಯ ಕ್ರಿಯೇಷನ್ ನಿರ್ದೇಶಕರಾದ ಡಾ.ನೀರಜಾ ನಾಗೇಂದ್ರಕುಮಾರ ಹೇಳಿದರು.ಸಿಂಗಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಜಿನ ಸಮ್ಮಿಲನ -2025 ಕಾರ್ಯಕ್ರಮದ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಜಾಬ್ ಓರಿಯೆಂಟೆಡ್ ಕೋರ್ಸ್‌ಗಳಿಂದ ಕೆಳಮಟ್ಟದವರ ಜೀವನಮಟ್ಟ ಸುಧಾರಿಸಲಿದೆ. ಕೆಳ ಮಟ್ಟದವರ ಕೃಷಿ, ನೀರಾವರಿ ಕೊರತೆಯಿಂದ ಹಿಂದಿದ್ದಾರೆ. ಉತ್ತರ ಕರ್ನಾಟಕದವರ ಪರಿಸ್ಥಿತಿ ಹದಗೆಟ್ಟಿದೆ. ಇದರಿಂದ ಆರ್ಥಿಕಮಟ್ಟ ಕುಸಿದು ಸಂಕಷ್ಟಕ್ಕಿಡಾಗಿದೆ. ಸುಹಾಸ್ತಿ ಯುವ ಜೈನ್ ಮಿಲನ್ ಕೆಲ ನಿಯಮಗಳನ್ನು ಹಾಕಿದೆ. ಎಲ್ಲರನ್ನೂ ಒಂದೆಡೆ ಸೇರಿಸಿದೆ. ಧರ್ಮ- ಸಂಸ್ಕೃತಿ-ಚಿಂತನೆಗಳು-ಉನ್ನತ ಹಾಗೂ ವೈವಿಧ್ಯಮಯವಾಗಲು ಅವರ ಅನುಭವ- ಹಿರಿಯರ ಮಾರ್ಗದರ್ಶನ, ಜೈನ ಧರ್ಮದ ಆಗು ಹೋಗುಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಶ್ರಾವಕರ ಪ್ರಶ್ನೆಗೆ ಉತ್ತರಿಸಿದರು.

ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಮತ್ತು ಸಂಘಟನೆಯಲ್ಲಿ ಏಕತೆ ಇದೆ. ಭಟ್ಟಾರಕರು ಎಲ್ಲೆಡೆ ತಿರುಗಿ ಪಂಚಕಲ್ಯಾಣ, ವಾರ್ಷಿಕ ಪೂಜೆ, ಮಂಡಲ್ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದು ಏಕತೆ. ಎಲ್ಲದಕ್ಕೂ ಒಗ್ಗಟ್ಟು ಅಗತ್ಯ ಎಂದರು.ಐಪಿಎಸ್ ಅಧಿಕಾರಿ ಜಿನೇಂದ್ರ ಕಣಗಾವಿ ಮಾತನಾಡಿ, ಶಿಕ್ಷಣದಿಂದ ಏಳಿಗೆ ಸಾಧ್ಯ. ಅಲ್ಪಸಂಖ್ಯಾತರಾದರು, ಅಧಿಕಾರ ವಂಚಿತರಾಗುತ್ತಿದ್ದು ಜೀತೋ ದಂತಹ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಜೈನ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲಾಗುತ್ತಿದ್ದು, ಸಾಮಾಜಿಕ ಬದ್ಧತೆಯಿಂದ ನಿರ್ವಹಿಸಬೇಕು. ಇದರಿಂದ ಐಎಎಸ್, ಐಪಿಎಸ್ ನಂತಹ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಾಣಲಿದೆ. ಸಂವಿಧಾನಬದ್ಧ ಅಧಿಕಾರ, ಜಗತ್ತಿನ ದೊಡ್ಡ ಅಧಿಕಾರಗಳನ್ನು ಪುಟ್ಟ ಯಹೂದಿ ಸಮಾಜ ಅಧಿಕಾರ ಹಿಡಿದಿದೆ. ಹಿರಿಯರು-ಕಿರಿಯರು ಸಂಘಟಿತರಾದಾಗ ಆರೋಗ್ಯ ಕಾಪಾಡಲು ಸಾಧ್ಯ ಎಂದು ಸಭಿಕರ ಪ್ರಶ್ನೆಗೆ ಉತ್ತರಿಸಿದರು.ಮೂಡುಬಿದರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ ಜೈನ ಸಭಿಕರ ಪ್ರಶ್ನೆಗೆ ಉತ್ತರ ನೀಡಿ, ಜೈನರು ರಾಜಕೀಯದಿಂದ ಹೊರಗಿದ್ದು ಜಾಗೃತರಾಗಬೇಕು. ಶಿಕ್ಷಣದ ಮೂಲಕ ಸಂಘಟಿತರಾಗಬೇಕು. ಮಠದಿಂದ ಶಿಕ್ಷಣ ನೀಡಬೇಕು. ಸಾಮಾಜಿಕ ಬೆಂಬಲ ಅಗತ್ಯ. ಸಂಸ್ಥೆಗಳನ್ನು ನಡೆಸಲು ಫೀ ಕಟ್ಟಬೇಕು, ಶಿಕ್ಷಣ ಸಂಸ್ಥೆ ನಡೆಯಲು ಹಣ ಅಗತ್ಯ ಎಂದು ತಿಳಿಸಿದರು.ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಕ್ಷೇತ್ರ ಕಲಾವಿದ ಚಿತ್ರ ಎಂ.ಜಿನೇಂದ್ರ ಸಭಿಕರ ಪ್ರಶ್ನೆ ಉತ್ತರಿಸಿ, ನಮ್ಮಲ್ಲಿ ಎಲ್ಲವೂ ನನ್ನ ಮೂಲಕ, ನನ್ನಿಂದ, ನಾನು ಎಂಬ ದುರ್ಬಾವನೆ ಇದೆ. ಅದು ಮೊದಲು ತೊಲಗಬೇಕು. ಕೆಲ ಸಮುದಾಯ, ಸಂಘಟನೆಗಳ ಮನಸ್ಥಿತಿ ಬದಲಾಗಬೇಕು. ಇದರಿಂದ ಸಂಘಟನೆ ಸಾಧ್ಯ. ಕಾನೂನು ಮತ್ತು ವ್ಯವಸ್ಥೆಯಿಂದ ಸಮಾಜ ಗಟ್ಟಿಯಾಗಲು ಸಾಧ್ಯ ಎಂದರು.ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನಮಠದ ಸ್ವಸ್ತಿ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ದಿಗಂಬರ ಪರಂಪರೆ ಪುರಾತನವಾದದ್ದು, 10ನೇ ಶತಮಾನದಿಂದಲೇ ಭಟ್ಟರಕ ಪರಂಪರೆ ಇದೆ. ಕರ್ನಾಟಕದಲ್ಲಿ 11 ಭಟ್ಟಾರಕರು, ತಮಿಳುನಾಡಿನಲ್ಲಿ ಎರಡು ಭಟ್ಟಾರಕರು, ಮಹಾರಾಷ್ಟ್ರದಲ್ಲಿ ಎರಡು ಭಟ್ಟಾರಕರು, ಮಧ್ಯಪ್ರದೇಶದಲ್ಲಿ ಒಂದು ಭಟ್ಟರಕರು ಹಾಗೂ ರಾಜಸ್ಥಾನದಲ್ಲಿ ಒಂದು ಭಟ್ಟಾರಕರು ಸೇರಿ 17 ಮಂದಿ ಜೈನ ಭಟ್ಟಾರಕರ ದಿಗಂಬರ ಜೈನ ಮಠಗಳಿವೆ. ಇದು ಧರ್ಮದ ಏಳಿಗೆಗೆ ಶ್ರಮಿಸುತ್ತಿದ್ದು, ಭಟ್ಟಾರಕರಿಲ್ಲದೆ ಯಾವುದೇ ಧರ್ಮ ಕಾರ್ಯ ಇಲ್ಲ ಎಂದು ಸಭಿಕರ ಪ್ರಶ್ನೆಗೆ ಉತ್ತರಿಸಿದರು.ರಾಜಕೀಯವಾಗಿ ಪ್ರಬಲರಾಗಲು ಸಂಘಟಿತರಾಗಬೇಕು. ಒಂದೇ ಉದ್ದೇಶವಿರಬೇಕು. ಎಲ್ಲ ಪಕ್ಷಗಳು ಜೈನ ಧರ್ಮಕ್ಕೆ ಸಹಕರಿಸಿದ್ದು, ಅದನ್ನು ನಾವು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದವರು.ಭೇದ ಮರೆತು ಸಂಘಟಿತರಾಗಬೇಕು. ಶ್ರವಣಬೆಳಗೊಳದ ದಿ.ಚಾರುಕೀರ್ತಿ ಶ್ರೀಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಸಮಾಜದ ಕಣ್ಣುಗಳಾಗಿದ್ದು, ಇದರಿಂದ ಸಮಾಜ ಬೆಳಕು ಕಂಡಿದೆ ಎಂದು ಶ್ರಾವಕರ ಪ್ರಶ್ನೆಗೆ ಉತ್ತರಿಸಿದರು.ಶ್ರೀಕ್ಷೇತ್ರ ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬುವುದು ತಂದೆ-ತಾಯಿಗಳಿಗಿರಬೇಕು. ನಿತ್ಯ ದೇವರ ದರ್ಶನ ಮಾಡಬೇಕು. ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದೇಳಬೇಕು. ಆದರೆ, ಇಂದು ಅಳಿಯನಾದವನು ಶ್ರೀಮಂತನಾಗಿರಬೇಕು. ಅಂತಸ್ತು, ಮನೆ, ಕಾರು, ಹಣ ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದಾರೆ. ಮಾನವನಿಗೆ ಅತಿಯಾಸೆ ಬೇಡ, ಮಾನವನ ಮನೋಭಾವ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಿಂಗಪುರ ಜೈನಮಿಲನ್ ಅಧ್ಯಕ್ಷರಾದ ಸುಮಂತ್ ಪ್ರಕಾಶ್, ಉಪಾಧ್ಯಕ್ಷರಾದ ಭೂಷಣ್ ಬಾಬುರಾವ್ ಪಾಟೀಲ, ಕಾರ್ಯದರ್ಶಿ ಪೂರ್ಣಿಮ ಪ್ರವೀಣ್ ಅವತೇ, ಖಜಾಂಚಿ ಬ್ರಹ್ಮೇಶ್ವರ ಜೈನ್, ಜಂಟಿ ಕಾರ್ಯದರ್ಶಿ ರಶ್ಮಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಶಾಂತ್ ಚವಜ್, ಚಂದ್ರಕಾಂತ್ ವನಕುದುರೆ, ರಾತುಲ್, ಅಶ್ವಿಶ್ ಜೈನ್ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಾಳ ಹರ್ಷೇಂದ್ರ ಜೈನ್, ಪಿ.ಸಿ.ರಾಜೇಶ, ಕೋಮಲ ಬ್ರಹ್ಮದೇವಯ್ಯ, ಮೈಸೂರು ಪದ್ಮಶ್ರೀ ಜೈನ ಸಮಾಜದ ಲತಾ ಸುದರ್ಶನ್, ಜೈನ್ ಮಿಲನ್ ಅಂತಾರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಪ್ರಸನ್ನಕುಮಾರ, ಡಾ..ಆಜಿತ್ ಮುರುಗುಂಡೆ, ಜಿನೇಂದ್ರ ಕಣಗಾವಿ, ಸಿಂಗಪುರ ಜೈನ್ ಮಿಲನ ಸುಮನ ಪ್ರಕಾಶ್, ಯುವರಾಜ, ಅನಿಲ್ ಕುಮಾರ್, ಶ್ವೇತಾ ಜೈನ್ ಮೂಡುಬಿದರೆ, ರಾಜಶ್ರೀ ಹಂಪನಾ, ಪ್ರೇಮ ಸುಖಾನಂದ, ಸಂಗೀತಾ ಜೈನ್, ಭುವನೇಂದ್ರ ಜೈನ್, ಚಿತ್ತ. ಎಂ.ಜಿನೇಂದ್ರ, ಬೆಳಗಾವಿಯ ಜಿತೇಂದ್ರ ಕುಮಾರ್ ಮಹಾವೀರ್ ಬೆಳಗಾವಿ ಸೇರಿದಂತೆ ಬೆಂಗಳೂರಿನ ಸುಹಾಸ್ತಿಯುವ ಜೈನ್ ಮಿಲನ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸುಮಾರು 250 ಜನ ಶ್ರಾವಕ- ಶ್ರಾವಕಿಯರು ಸೇರಿದಂತೆ ಈ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸ್ನೇಹಶ್ರೀ ಪ್ರಾರ್ಥಿಸಿದರು. ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷ ವಜ್ರ ಕುಮಾರ್ ಜೈನ್ ಸ್ವಾಗತಿಸಿದರು. ಟಿವಿ ನಿರೂಪಕಿ ನಮಿತಾ ಜೈನ್ ಹಾಗೂ ಮಾಳ ಹರ್ಷಿಂದ್ರೆ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸುಹಾಸ್ತಿ ಯುವ ಜೈನ್ ಮಿಲನ ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಚಿತ್ತ.ಎಂ.ಜಿನೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಇಂದಿನ ತಾಂತ್ರಿಕ ಬದುಕಿನಲ್ಲಿ ಆಧುನಿಕತೆಯಿಂದ ಜೀವನವೇ ಅಯೋಮಯವಾಗಿದ್ದು, ಮಾನವನ ಬದುಕು ಅತಂತ್ರವಾಗುತ್ತಿದೆ. ಧರ್ಮದಿಂದ ಜೀವನಮಟ್ಟ ಸುಧಾರಿಸಿ ಧರ್ಮದ ಬುನಾದಿ ಅಡಿ ವ್ಯಕ್ತಿತ್ವ ರೂಪಿಸಿಕೊಂಡಾಗ ನಮ್ಮ ನೈತಿಕತೆ ವೃದ್ಧಿಸಿಕೊಳ್ಳಲು ಸಾಧ್ಯ.

-ಡಾ.ನೀರಜಾ ನಾಗೇಂದ್ರ ಕುಮಾರ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು.