ಸಾರಾಂಶ
ಹಾನಗಲ್ಲ ತಾಲೂಕು ಸೌಹಾರ್ದಕ್ಕೆ ಹೆಸರಾಗಿದೆ. ಇಲ್ಲಿ ಸಂತ ಮಹಾಂತರು ತಪಸ್ಸು ಮಾಡಿದ್ದಾರೆ. ನಿತ್ಯ ನಿರಂತರ ಧಾರ್ಮಿಕ ಹಬ್ಬಗಳು ಅರ್ಥಪೂರ್ಣವಾಗಿ ಇಲ್ಲಿ ನೆರವೇರುತ್ತವೆ.
ಹಾನಗಲ್ಲ: ಧಾರ್ಮಿಕ ಕಾರ್ಯಗಳು ಅತ್ಯಂತ ಶ್ರದ್ಧೆಯಿಂದ ಯಾವುದೇ ಭೇದಕ್ಕೆ ಅವಕಾಶವಿಲ್ಲದಂತೆ ಒಟ್ಟಾಗಿ ನಡೆದಾಗ ಅದಕ್ಕೊಂದು ಸೌಹಾರ್ದದ ಅರ್ಥಪೂರ್ಣತೆ ಪ್ರಾಪ್ತವಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಕಾಶ್ಮೀರಿ ದರ್ಗಾದ 57ನೇ ಉರೂಸ್ ಕಾರ್ಯಕ್ರಮದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಸೌಹಾರ್ದಕ್ಕೆ ಹೆಸರಾಗಿದೆ. ಇಲ್ಲಿ ಸಂತ ಮಹಾಂತರು ತಪಸ್ಸು ಮಾಡಿದ್ದಾರೆ. ನಿತ್ಯ ನಿರಂತರ ಧಾರ್ಮಿಕ ಹಬ್ಬಗಳು ಅರ್ಥಪೂರ್ಣವಾಗಿ ಇಲ್ಲಿ ನೆರವೇರುತ್ತವೆ ಎಂದರು.
ಇತ್ತೀಚೆಗಷ್ಟೇ ಗ್ರಾಮದೇವಿ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಶ್ರದ್ಧಾ ಭಕ್ತಿಯಿಂದ ನಡೆದಿದೆ. ಅದು ಇಡೀ ನಾಡಿನಲ್ಲೆ ಹೆಸರುವಾಸಿಯಾಗಿದೆ. ಅದೇ ರೀತಿ ಈವರೆಗೆ ಕಾಶ್ಮೀರಿ ದರ್ಗಾದ ಉರೂಸ್ ಅತ್ಯಂತ ಸೌಹಾರ್ದದಿಂದ ನಡೆದಿದ್ದು, ಈ ನೆಲದ ಇತಿಹಾಸವಾಗಿವೆ. 57ನೇ ಉರೂಸ್ ಎಲ್ಲರ ಸಹಕಾರದಿಂದ, ಸರ್ಕಾರದ ಇಲಾಖೆಗಳು ತಮ್ಮ ಜವಾಬ್ದಾರಿಯನ್ನೂ ನಿರ್ವಹಿಸುವ ಮೂಲಕ, ಯಾವುದೇ ಅಡಚಣೆಗೆ ಅವಕಾಶವಿಲ್ಲದಂತೆ ನಡೆಯಲು ಸಹಕರಿಸೋಣ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಸೌಹಾರ್ದವೇ ನಿಜವಾದ ಸಾರ್ವಜನಿಕ ಜೀವನದ ಯಶಸ್ಸು. ಆಯಾ ಧರ್ಮಕ್ಕೆ ಅನುಗುಣವಾಗಿ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಎಲ್ಲ ಹಬ್ಬಗಳಲ್ಲಿ ಎಲ್ಲ ಧರ್ಮದವರೂ ಭಾಗವಹಿಸುತ್ತಾರೆ. ಆದರೆ ಕೆಲವು ಕಿಡಿಗೇಡಿಗಳು ಯಾವುದೋ ಸ್ವಾರ್ಥಕ್ಕಾಗಿ ಹಬ್ಬಗಳಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿ ಮಾಡುವ ಸಂದರ್ಭಗಳಿರುತ್ತವೆ. ಇದರಿಂದ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳಿಗೂ ಸಮಸ್ಯೆಯಾಗುತ್ತದೆ. ಇಂಥದಕ್ಕೆ ಅವಕಾಶವಿಲ್ಲದಂತೆ ಪೊಲೀಸ್ ನಿಗಾ ಇರುತ್ತದೆ ಎಂದರು.ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ಸರಾಸರಿ 1500 ಜನಕ್ಕೆ ಒಬ್ಬರಂತೆ ಪೊಲೀಸ್ ಇದೆ. ಪೊಲೀಸರು ಇಲ್ಲದೆ ಹಬ್ಬಗಳು ನಡೆಯುವಂತಾಗಬೇಕು. ಆಗ ಧರ್ಮ ಕಾರ್ಯಗಳಿಗೆ ಇನ್ನಷ್ಟು ಸೊಗಸು ಬರುತ್ತದೆ. ಹಾನಗಲ್ಲ ಉರೂಸ್ ಕಾರ್ಯಕ್ರಮಕ್ಕೆ ಪೊಲೀಸ್ ಕಡೆಯಿಂದ ಎಲ್ಲ ಬಂದೋಬಸ್ತ್ ಒದಗಿಸಲಾಗುವುದು ಎಂದರು.
ತಹಸೀಲ್ದಾರ್ ಎಸ್. ರೇಣುಕಾ, ಶಿಗ್ಗಾಂವಿ ಡಿವೈಎಸ್‌ಪಿ ವಿ.ವಿ. ಗುರುಶಾಂತಪ್ಪ, ಸಿಪಿಐ ಅನಿಲ ರಾಠೋಡ ಶಾಂತಿ ಸಭೆಯಲ್ಲಿದ್ದರು. ವಿವಿಧ ಸಮುದಾಯದ ಮುಖಂಡರಾದ ಮಾಜಿ ಪುರಸಭೆ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಎಂ.ಎಂ. ಮುಲ್ಲಾ, ಬಾಬಾಜಾನ ಕೊಂಡವಾಡಿ, ಎಸ್.ಎಂ. ಕೋತಂಬರಿ, ಮಂಜಣ್ಣ ನಾಗಜ್ಜನವರ, ಚಮನಸಾಬ ಕಿತ್ತೂರ, ರಾಮು ಯಳ್ಳೂರ, ಗಣೇಶ ಮೂಡ್ಲಿಯವರ ಮೊದಲಾದವರು ಮಾತನಾಡಿದರು.