ನವಗ್ರಹ ತೀರ್ಥಕ್ಷೇತ್ರದಲ್ಲಿ ಧಾರ್ಮಿಕ, ಶೈಕ್ಷಣಿಕ ಕ್ರಾಂತಿ: ಡಾ. ಮುಕ್ತಿಮುನಿ ಶಿವಾಚಾರ್ಯ

| Published : Jan 26 2025, 01:33 AM IST

ನವಗ್ರಹ ತೀರ್ಥಕ್ಷೇತ್ರದಲ್ಲಿ ಧಾರ್ಮಿಕ, ಶೈಕ್ಷಣಿಕ ಕ್ರಾಂತಿ: ಡಾ. ಮುಕ್ತಿಮುನಿ ಶಿವಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಗುಣಧರ ನಂದಿ ಮಹಾರಾಜರು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಮುಕ್ತಿ ಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಹುಬ್ಬಳ್ಳಿ: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಗುಣಧರ ನಂದಿ ಮಹಾರಾಜರು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಮುಕ್ತಿ ಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ನಡೆದಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಶನಿವಾರ ಜರುಗಿದ ಸರ್ವಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ದೂರ ದೂರದಿಂದ ಜೈನ ಆಚಾರ್ಯ ಸಂತರು ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಅವರ ದರ್ಶನ ದೊರೆತಿದ್ದು, ಭಕ್ತರೆಲ್ಲರ ಭಾಗ್ಯ. ಇಲ್ಲಿ ನಡೆದಿರುವ ಕಾರ್ಯಕ್ರಮ ಸಣ್ಣದಲ್ಲ. ದಕ್ಷಿಣ ಭಾರತದಲ್ಲೇ ಬೃಹತ್ ಧರ್ಮಪರಿಷತ್ತು ಇದು ಎಂದರು.

ಪೀರ್ ಈ ತರೀಕ್ ಅಲ್ಲಮ ಸೈಯದ್ ಷಾ ಮಹಮ್ಮದ್ ತಾಜುದ್ದೀನ್ ಖಾದ್ರಿ ಮಾತನಾಡಿ, ಬರೀ ಧಾರ್ಮಿಕ ಕಾರ್ಯವಲ್ಲದೇ ಎಲ್ಲ ಧರ್ಮದ ಮಕ್ಕಳಿಗೂ ಪ್ರವೇಶ ನೀಡಿ, ಉಚಿತ ಶಿಕ್ಷಣ, ಊಟ ವಸತಿ ನೀಡಿರುವ ಆಚಾರ್ಯ ಗುಣಧರ ನಂದಿ ಮಹಾರಾಜರು ನಿಜಕ್ಕೂ ಭಾವೈಕ್ಯತೆ ಮೆರೆದಿದ್ದಾರೆ. ಅವರಿಗೆ ನಿಮ್ಮಂಥಹ ಲಕ್ಷಾಂತರ ಭಕ್ತರ ಬೆಂಬಲವಿದೆ. ಇಲ್ಲಿ ನಡೆದಿರುವ ಕಾರ್ಯಗಳು ನಿಜಕ್ಕೂ ದೇಶಕ್ಕೆ ಮಾದರಿಯಾಗಿವೆ ಎಂದರು.

ಇಂದು ತಿರಂಗಾ ಅಭಿಷೇಕ

ಆಚಾರ್ಯ ಗುಣಧರ ನಂದಿ ಮಹಾರಾಜರು ಮಾತನಾಡಿ, ಜೈನ ಭಾರತದ ಪುರಾತನ ಧರ್ಮ. ಅದು ಎಂದಿನಿಂದಲೂ ಉಳಿದ ಧರ್ಮಗಳ ಸಹಕಾರದಿಂದಲೇ ಬೆಳೆದಿದೆ. ದೇಶವಿದ್ದರೆ ನಾವು. ಹಾಗಾಗಿ ಭಾರತ ದೇಶ ಶಕ್ತಿಯುತವಾಗಬೇಕು. ಅದಕ್ಕಾಗಿ ಭಾನುವಾರ ತೀರ್ಥಂಕರರಿಗೆ ತಿರಂಗಾ(ತ್ರಿವರ್ಣಗಳ) ಅಭಿಷೇಕ ಜರುಗಲಿದೆ. ಇದು ದೇಶದ ಯಾವ ಪ್ರದೇಶದಲ್ಲೂ ನಡೆದಿಲ್ಲ. ಮೊದಲ ಬಾರಿ ವರೂರಿನಲ್ಲಿ ನಡೆಯಲಿದೆ. ಬಹುಸಂಖ್ಯೆಯ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಶ್ರೀಗಳು, ನಾಗಲಾಪುರ ನಾಗಲಿಂಗೇಶ್ವರಮಠದ ಚನ್ನಋಷಭೇಂದ್ರ ಶ್ರೀಗಳು, ಶಿರೋಳದ ಗುರುಸಿದ್ದೇಶ್ವರ ಶಿವಾಚಾರ್ಯರು, ಸುಳ್ಳ ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಶ್ರೀಗಳು, ಬ್ಯಾಹಟ್ಟಿಯ ಹಿರೇಮಠದ ಮರುಳುಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ದಾನಿಗಳಿಗೆ, ಛಬ್ಬಿ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರು, ಸದಸ್ಯರು, ಆಚಾರ್ಯರು, ವಿವಿಧ ಗ್ರಾಮಗಳ ಮಹಿಳೆಯರಿಗೆ ಸನ್ಮಾನಿಸಲಾಯಿತು.

ಜಂಬೂ ದ್ವೀಪ ಪೂಜೆ, ಮಹಾಮಸ್ತಕಾಭಿಷೇಕ

ಸುಮೇರು ಪರ್ವತ ಸ್ಥಾಪನೆ ಅಂಗವಾಗಿ ವರೂರು ಜೈನ ತೀರ್ಥದಲ್ಲಿ ಶನಿವಾರ ಬೆಳಗ್ಗೆ ಜಂಬೂ ದ್ವೀಪದ ಪೂಜಾ ವಿಧಾನಗಳು ಶ್ಲೋಕ, ಮಂತ್ರಪಠಣ, ಹಾಡು ಸಂಗೀತಗಳೊಂದಿಗೆ ನೆರವೇರಿತು. ದ್ವೀಪದ ಪ್ರತಿಯೊಂದು ದಿಕ್ಕಿನ ಪರ್ವತಗಳು, ನದಿಗಳು, ಸರೋವರಗಳು, ತೀರ್ಥಕ್ಷೇತ್ರಗಳು, ಮಂದಿರಗಳು ಮೊದಲಾದವುಗಳಿಗೆ ಅರ್ಘ್ಯ ಪ್ರದಾನ ಮಾಡಲಾಯಿತು.

ಶನಿವಾರವೂ ಮಧ್ಯಾಹ್ನದ ನಂತರ ಕ್ಷೇತ್ರದಲ್ಲಿರುವ 9 ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಅದ್ಧೂರಿಯಿಂದ ನೆರವೇರಿತು. ಶುದ್ಧಜಲ, ಹಳದಿ, ಕುಂಕುಮ, ಗಂಧ, ಚಂದನ, ಅಷ್ಟಗಂಧ, ಕಬ್ಬಿನ ರಸ, ಸಮುದ್ರದ ನೀರು, ಗಿಡಮೂಲಿಕೆಗಳ ನೀರು, ಆಯುರ್ವೇದ ಔಷಧಿಯುಕ್ತ ನೀರು ಮೊದಲಾದವುಗಳಿಂದ ಮಸ್ತಕಾಭಿಷೇಕ ನೆರವೇರಿತು.