ಸೃಜನಶೀಲ ಆಲೋಚನೆಗೆ ಕನ್ನಡ ಪಠ್ಯವನ್ನು ಅವಲಂಬಿಸಿ: ಡಿ.ಮಂಜುನಾಥ

| Published : Aug 18 2024, 01:57 AM IST

ಸಾರಾಂಶ

ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಅರವಿಂದ ವಸತಿ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲಾ ಅಂಗಳದಲ್ಲಿ ವಿದ್ಯಾರ್ಥಿಗಳಿಗಾಗಿ ಕಥೆ, ಕವನ, ಪ್ರಬಂಧ ರಚನಾ ಕಮ್ಮಟವನ್ನು ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಹೊಂದಿರುವ ಕನ್ನಡ ಪಠ್ಯದ ಮೂಲಕ ಸಾಹಿತ್ಯ ಸೃಜನಶೀಲತೆಗೆ ಪ್ರವೇಶ ಪಡೆಯಿರಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಗುರುವಾರ ಶಂಕರಘಟ್ಟದಲ್ಲಿರುವ ಅರವಿಂದ ವಸತಿ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲಾ ಅಂಗಳದಲ್ಲಿ ವಿದ್ಯಾರ್ಥಿಗಳಿಗಾಗಿ ಕಥೆ, ಕವನ, ಪ್ರಬಂಧ ರಚನಾ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸೃಜನಶೀಲ ಆಲೋಚನೆಗೆ ಕನ್ನಡ ಪಠ್ಯವನ್ನು ಅವಲಂಬಿಸಬೇಕು. ಪಠ್ಯವನ್ನು ಸರಿಯಾಗಿ ಓದುವ ಮೂಲಕ ಮನನ ಮಾಡಿಕೊಳ್ಳಿ. ನಿಮ್ಮ ಪಠ್ಯ ದಲ್ಲಿರುವ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು, ಓದುವ ನೋಡುವ ಕ್ರಮ ಬದಲಾಗಬೇಕಿದೆ. ನೀವು ಕವಿಗಳಾಗುವ ಮುನ್ನ ಮೊದಲು ಮನುಷ್ಯರಾಗಿ. ನಿಮ್ಮ ವಯಸ್ಸಿನ ಎಷ್ಟೋ ಮಕ್ಕಳು ಮನೆಯನ್ನು ನಡೆಸುವ ಜವಾಬ್ದಾರಿ ತೆಗೆದುಕೊಂಡಿರುವುದನ್ನು ನೋಡುತ್ತಿದ್ದೇವೆ. ನಿಮ್ಮ ಶಾಲಾ ದಿನಗಳು ಓದುವ, ಬರೆಯು ವುದಷ್ಟೇ ಸೀಮಿತವಲ್ಲ. ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಸಂಕಲ್ಪವಿರಬೇಕು. ನಾವು ಏನಾಗಬೇಕು ಎನ್ನುವ ಪರಿಕಲ್ಪನೆಯಿರಬೇಕು ಎಂದು ಹೇಳಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಭಾಷಾ ಸಹ ಪ್ರಾಧ್ಯಾಪಕ ಡಾ.ಎಸ್.ಎಂ.ಮುತ್ತಯ್ಯ ಮಾತನಾಡಿ, ಹೇಗೆ ನೀರಲ್ಲಿ ಈಜುವುದನ್ನು ನೆಲದ ಮೇಲೆಯೋ ಅಥವಾ ಕೊಠಡಿಯಲ್ಲಿ ಕುಳಿತು ಹೇಳಿದರೆ ಬಾರದು. ಹಾಗೆಯೇ ಕಾವ್ಯ ಬರೆಯುವ ಮೊದಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬೇರೆಯವರು ಬರೆದ ಕವನಗಳನ್ನು ಓದತ್ತಾ ಪ್ರೇರಣೆಗಳನ್ನು ಪಡೆದು, ಕಾವ್ಯ ಪ್ರತಿಭೆ ಪಡೆದುಕೊಳ್ಳಿ ಎಂದು ವಿವರಿಸಿದರು.

ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ನೀವು ಬರೆಯುವ ಮುನ್ನ ಯಾವುದೇ ವಿಚಾರ, ಘಟನೆಗಳು ಕಾಡಬೇಕು. ಭಾವ ತೀವ್ರತೆ, ಹಸಿವು, ಸಂಕಟದ ಅನುಭವವಿರಬೇಕು. ಎಲ್ಲಿ ಯಾರಿಗೇ ನೋವಾದರೂ ಅದು ನಮ್ಮನ್ನು ಕಾಡಬೇಕು ಎನ್ನುವ ವಿಚಾರಗಳನ್ನು ಹೇಳುತ್ತಲೇ ಪ್ರಬಂಧ ಬರೆಯುವ ತಂತ್ರವನ್ನು ವಿವರಿಸಿದರು.

ಕಥೆ ಬರೆಯುವ, ಹೇಳುವ ಕೌಶಲ್ಯತೆ ಕುರಿತು ರಂಗಕರ್ಮಿ ಡಾ.ಜಿ.ಆರ್.ಲವ ಮಾತನಾಡಿದರು. ವಸತಿ ಶಾಲೆಯ ಕಾರ್ಯದರ್ಶಿ ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಗಾನವಿ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಹಾಲೇಶ್ ಸ್ವಾಗತಿಸಿದರು. ಭದ್ರಾವತಿ ತಾ. ಕಸಾಪ ಅಧ್ಯಕ್ಷ ಕೋಡ್ಲುಯಜ್ಞಯ್ಯ, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಎಂ. ಎಂ. ಸ್ವಾಮಿ, ಎಚ್. ತಿಮ್ಮಪ್ಪ, ಕಮಲಾಕರ, ಕವಿ ಸಂದೀಪ ಚೌಲಹಳ್ಳಿ ಮತ್ತಿತರರು ಇದ್ದರು.