ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಎಲೆಮರೆ ಕಾಯಿಯಂತೆ ಅರಣ್ಯ ಇಲಾಖೆ ಸಿಬ್ಬಂದಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಹಗಲಿರುಳು ಕೆಲಸ ಮಾಡುವ ಮೂಲಕ ನಮಗೆ ಅರಣ್ಯ ಉಳಿಸಿಕೊಡುವಲ್ಲಿ ನಿರತರಾಗಿದ್ದು, ಅರಣ್ಯ ಸಂರಕ್ಷಣೆಗಾಗಿ ತ್ಯಾಗ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹೇಳಿದರು.ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದ ಅರಣ್ಯ ಹುತಾತ್ಮರ ಸ್ಮಾರಕದ ಬಳಿ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹುತಾತ್ಮರಿಗೆ ಗೌರವ ಸೂಚಿಸಿ ನಂತರ ಮಾತನಾಡಿದರು,ಅರಣ್ಯ ಸಿಬ್ಬಂದಿ ಅರಣ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಾಣದ ಹಂಗು ತೊರೆದು ಕಳ್ಳರನ್ನು ಹಿಡಿದು ತಂದು ನ್ಯಾಯಾಲಯಕ್ಕೆ ಒಪ್ಪಿಸುವ ಕೆಲಸ ನಿರಂತರವಾಗಿ ನಡೆದಿದೆ. ಪರಿಸರ ಚೆನ್ನಾಗಿರಬೇಕಾದರೆ ಕಾಡು, ವನ್ಯ ಜೀವಿಗಳು ಉಳಿಯಬೇಕು, ಇವುಗಳ ಉಳಿವಿಗಾಗಿ ಹಗಲಿರಳು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿ ಕಾರ್ಯ ಶ್ಲಾಘನೀಯವಾದುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬಿಆರ್‌ಟಿ ಡಿಸಿಎಫ್ ಬಿ.ಎಸ್.ಶ್ರೀಪತಿ, ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಸೆ.೧೧ ರಂದು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ದೇಶಾದ್ಯಂತ ಆಚರಿಸಲಾಗುತ್ತದೆ ಎಂದರು.ಸೆ.೧೧, ೧೭೩೦ರಲ್ಲಿ ಕುಖ್ಯಾತ ಖೇಜರ್ಲಿ ಹತ್ಯಾಕಾಂಡ ನಡೆದ ದಿನ, ಅಂದಿನ ರಾಜಸ್ಥಾನದ ಮಹಾರಾಜ ಅಭಯ್ ಸಿಂಗ್ ಕಾಡಿನಲ್ಲಿರುವ ಖೇಜರ್ಲಿ ಮರಗಳನ್ನು ಕಡಿಯಲು ಆದೇಶ ನೀಡಿದರು. ಬಿಷ್ಣೋಯ್ ಸಮುದಾಯದ ಜನರು ಖೇಜರ್ಲಿ ಮರಗಳನ್ನು ಪವಿತ್ರವೆಂದು ಪರಿಗಣಿಸಿ ಆದೇಶದ ವಿರುದ್ಧ ಪ್ರತಿಭಟಿಸಿದರು. ಪ್ರತಿಭಟನೆಯ ಸಂಕೇತವಾಗಿ, ಅಮೃತಾ ದೇವಿ ಎಂಬ ಮಹಿಳೆ ಖೇಜರ್ಲಿ ಮರಗಳನ್ನು ಕಡಿಯದಂತೆ ರಕ್ಷಿಸಲು ತನ್ನ ತಲೆಯನ್ನು ಅರ್ಪಿಸಿದಳು. ಅಮೃತಾ ದೇವಿಯ ಶಿರಚ್ಛೇದ ಮಾಡಿದರು. ಅಂದು ಅಮೃತಾ ದೇವಿಯ ಚಿಕ್ಕ ಮಕ್ಕಳು ಸೇರಿದಂತೆ ೩೫೦ ಕ್ಕೂ ಹೆಚ್ಚು ಜನರನ್ನು ಕೊಂದರು, ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಎಂದು ಘೋಷಿಸಲಾಯಿತು ಎಂದರು.ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಕೆ. ಸುರೇಶ್ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಸರು ಓದಿದರು. ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ, ಜಿಪಂ ಸಿಇಒ ಮೋನಾ ರಾವತ್, ಉಪ ಅರಣ್ಯ ಸಂರಕ್ಷಣಧಿಕಾರಿ, ಸಭ್ಯಶ್ರೀ.ವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ಇತರರು ಉಪಸ್ಥಿತರಿದ್ದರು.