ತೀರ್ಥಹಳ್ಳಿ: ಜೀವನದ ಹಾದಿಯಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಅಕ್ಷರ ಕಲಿಸಿ ಜ್ಞಾನದೀವಿಗೆಯನ್ನು ಬೆಳಗಿದ ಗುರುವಿನ ಸ್ಮರಣೆ ಅಗತ್ಯ ಎಂದು ಸೀನಿಯರ್ ಛೇಂಬರ್ ಇಂಟರ್‌ ನ್ಯಾಷನಲ್‍ನ ಅಧ್ಯಕ್ಷ ಪಿಪಿಎಫ್ ನಂದಕಿಶೋರ್ ಕಾಮತ್ ಕಟಪಾಡಿ ಹೇಳಿದರು.

ಗುರು ಪೂರ್ಣಿಮೆಯ ಅಂಗವಾಗಿ ಸೀನಿಯರ್ ಛೇಂಬರ್ ಇಂಟರ್‌ ನ್ಯಾಷನಲ್ ತೀರ್ಥಹಳ್ಳಿ ಲೀಜನ್ ವತಿಯಿಂದ ಶಿಕ್ಷಕರಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಜೀವನದ ಮುಸ್ಸಂಜೆಯಲ್ಲಿರುವ 92 ವರ್ಷ ಪ್ರಾಯದ ಎಸ್. ನಾಗಪ್ಪ ಮಾಸ್ಟರ್ ಅವರನ್ನು ಪಟ್ಟಣದ ರೈಸ್‍ಮಿಲ್ ಕೇರಿಯಲ್ಲಿರುವ ಅವರ ನಿವಾಸದಲ್ಲಿ ಗೌರವಿಸಿ ಮಾತನಾಡಿದರು.

ಶಿಕ್ಷಣ ವ್ಯಾಪಾರಿಕರಣವಾಗಿರುವ ಈ ಕಾಲಘಟ್ಟದಲ್ಲಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೇ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಸಲುವಾಗಿ ಹತ್ತಾರು ಕಿಮೀ ನಡೆದು ಹೋಗಿ ಅಕ್ಷರ ಕಲಿಸಿರುವ ನಾಗಪ್ಪ ಮಾಸ್ಟರ್‍ನಂತಹ ಶಿಕ್ಷಕರು ಅತಿ ವಿರಳ. ಕೇವಲ ಸಂಬಳಕ್ಕಾಗಿ ವೃತ್ತಿಯಲ್ಲಾ ಎಂಬ ಧ್ಯೇಯದೊಂದಿಗೆ ತಮ್ಮ ಬದುಕಿನುದ್ದಕ್ಕೂ ಶಿಕ್ಷಕ ವೃತ್ತಿಗೆ ನ್ಯಾಯ ದೊರಕಿಸಿದ್ದ ನಾಗಪ್ಪ ಮಾಸ್ಟರ್ ಅನುಕರಣೀಯರಾಗಿದ್ದು ಗುರುಪೂರ್ಣಿಮೆಯ ಈ ದಿನದಂದು ಕೃತಜ್ಞತೆಯ ಭಾವನೆಯೊಂದಿಗೆ ಗೌರವಿಸುವುದಕ್ಕೆ ಸಂತೋಷವಾಗುತ್ತಿದೆ ಎಂದರು.

ಪತ್ರಕರ್ತ ಡಾನ್ ರಾಮಣ್ಣ, ಸೀನಿಯರ್ ಪಿಪಿಎಫ್ ಸರ್ಜಾ ಕೈಲಾಶ್‍ನಾಥ್, ಕೆಪಿಎಸ್ ಸ್ವಾಮಿ, ಶಿಕ್ಷಕರಾದ ಗೋಪಾಲಕೃಷ್ಣ, ಕಿರಣ್ ಕುಮಾರ್, ಪತ್ರಕರ್ತ ಶ್ರೀಕಾಂತ್ ನಾಯಕ್ ಹಾಗೂ ಅಕ್ಷಯ್ ಹಾಗೂ ನಾಗಪ್ಪ ಮಾಸ್ಟರ್ ಕುಟುಂಬದವರು ಇದ್ದರು. ಫೊಟೋ 29 ಟಿಟಿಎಚ್ 02: ಸೀನಿಯರ್ ಛೇಂಬರ್ ಇಂಟರ್‌ ನ್ಯಾಷನಲ್ ವತಿಯಿಂದ ಗುರುಪೂರ್ಣಿಮೆ ಹಿನ್ನೆಲೆ ಎಸ್.ನಾಗಪ್ಪ ಮಾಸ್ಟರ್ ಅವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು.