ಒಳಮೀಸಲಾತಿಯ ಪೂರ್ಣ ಪ್ರಮಾಣದ ಜಾರಿಗೆ ಅಡ್ಡಿಯಾಗಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ರಾಜ್ಯ ಮಾದಿಗ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಿ.ಆರ್.ಭಾಸ್ಕರ ಪ್ರಸಾದ್ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹರಿಹರ
ಒಳಮೀಸಲಾತಿಯ ಪೂರ್ಣ ಪ್ರಮಾಣದ ಜಾರಿಗೆ ಅಡ್ಡಿಯಾಗಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ರಾಜ್ಯ ಮಾದಿಗ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಿ.ಆರ್.ಭಾಸ್ಕರ ಪ್ರಸಾದ್ ಆಗ್ರಹಿಸಿದರು.ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯ ಮಾದಿಗ ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿಯಿಂದ ಬೆಂಗಳೂರಿನಿಂದ ಬೆಳಗಾವಿಗೆ ಹೊರಟ ಜಾಥಾವು ಮಂಗಳವಾರ ನಗರದ ಹೊರವಲಯದ ಮೈತ್ರಿವನಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.
35 ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತಂದಿದೆ. ಆದರೂ ಈಗಲೂ ಒಳ ಮೀಸಲಾತಿ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ. ಈ ಯೋಜನೆ ಜಾರಿಗೆ ಕೆಲವು ಪಟ್ಟಭದ್ರರು ಅಡ್ಡಿಯಾಗಿರುವುದು ಬೇಸರ ಮೂಡಿಸಿದೆ ಎಂದರು.ಸಚಿವ ಎಚ್.ಸಿ.ಮಹಾದೇವಪ್ಪ ಹಾಗೂ ಇತರೆ ಕೆಲವರು ಈ ಯೋಜನೆ ಜಾರಿಗೆ ಅಡ್ಡಿಯಾಗಿರುವುದು ಬಹಿರಂಗವಾಗಿದೆ. ಇವರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವು ಇಂದು, ನಾಳೆ ಎಂದು ಕಾಲಹರಣ ಮಾಡುತ್ತಿದೆ. ಶೋಷಿತರಲ್ಲಿ ಅತ್ಯಂತ ಶೋಷಣೆಗೆ ಒಳಗಾದ ಮಾದಿಗ ಸಮುದಾಯದ ಮಕ್ಕಳ ಭವಿಷ್ಯದ ಜತೆ ಯಾರೂ ಚೆಲ್ಲಾಟ ಆಡಬಾರದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ದುಸ್ಥಿತಿಯನ್ನು ಸೃಷ್ಟಿ ಮಾಡುತ್ತಿರುವವರ ವಿರುದ್ಧ ಸಮುದಾಯ ಬಂಡೇಳುವ ಮುನ್ನ ಒಳಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ಸರ್ಕಾರ ಮುಂದಾಗಬೇಕೆಂದು ಎಚ್ಚರಿಕೆ ನೀಡಿದರು.
ಮೈತ್ರಿನವನದಲ್ಲಿರುವ ಕದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರ ಸಮಾಧಿಗೆ ಆರಂಭದಲ್ಲಿ ಪೂಜೆ ಸಲ್ಲಿಸಲಾಯಿತು. ರಾಜ್ಯ ಕಾಂಗ್ರೆಸ್ ವಕ್ತಾರ ಬಾಲಸ್ವಾಮಿ ಕೊಡ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ, ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಬಸವರಾಜ. ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳಾದ ಎಲ್.ಜಯಪ್ಪ, ಆನಂದಕುಮಾರ್ ಎಂ.ಎಸ್., ಎಲ್.ನಿರಂಜನಮೂರ್ತಿ, ಎ.ಕೆ.ಭೂಮೇಶ್, ಜಿಗಳಿ ಹಾಲೇಶ್, ಎಂ.ಬಿ.ಅಣ್ಣಪ್ಪ, ಎಚ್.ದೇವೇಂದ್ರಪ್ಪ, ಮಂಜುನಾಥ ಎಂ., ಮಂಜಪ್ಪ ಜಿ.ಎಂ.ರಾಜನಹಳ್ಳಿ, ವಿಶ್ವನಾಥ ಮೈಲಾಳ, ಭಾನುವಳ್ಳಿ ಮಂಜಪ್ಪ, ಶಿವರಾಮ್ ಕೆ.ಬೇವಿಹಳ್ಳಿ ಇತರರು ಇದ್ದರು.