Remove ineligible people from social security scheme
- ದಶಕದಿಂದ ರಾಜ್ಯ ಸರ್ಕಾರಕ್ಕೆ ₹15 ಸಾವಿರ ಕೋಟಿಗೂ ಅಧಿಕ ನಷ್ಟ: ಕೆಆರ್‌ಎಸ್ ಪಕ್ಷ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹರನ್ನು ತೆಗೆದು ಹಾಕುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜಯ್ಯ, ರಾಜ್ಯದಲ್ಲಿ 6 ಪಿಂಚಣಿ/ಸಹಾಯಧನ ಯೋಜನೆಯಡಿ ಸುಮಾರು 81,66,558 ಫಲಾನುಭವಿಗಳು ಧನಸಹಾಯ ಪಡೆಯುತ್ತಿದ್ದು, ಪ್ರತಿ ವರ್ಷ ಸರಾಸರಿ ₹2 ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಇದಕ್ಕೆ ಖರ್ಚಾಗುತ್ತಿದೆ ಎಂದರು.
ಕಳೆದೊಂದು ದಶಕದಿಂದ ಸುಮಾರು ₹15 ಸಾವಿರ ಕೋಟಿಗಿಂತಲೂ ಹೆಚ್ಚು ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದು, ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ಮಾಡಿ, ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಶಿಕ್ಷೆಗೊಳಪಡಿಸುವ ಜೊತೆಗೆ ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ದಾವಣಗೆರೆ ಜಿಲ್ಲೆಯಲ್ಲಿ 1,04,805 ಫಲಾನುಭವಿಗಳಲ್ಲಿ 18,493 ಅನರ್ಹ ಫಲಾನುಭವಿಗಳಿದ್ದಾರೆ. ಸಾವಿರಾರು ಕೋಟಿ ರು.ಗಳಷ್ಟು ಸಾರ್ವಜನಿಕರ ತೆರಿಗೆ ಹಣ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನರ್ಹರ ಪಾಲಾಗುತ್ತಿದೆ. ಲಂಚ ಪಡೆದು ಅನರ್ಹರಿಗೆ ಸೌಲಭ್ಯವನ್ನು ಒದಗಿಸುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಸತಾಯಿಸಲಾಗುತ್ತಿದೆ ಎಂದು ಅವರು ದೂರಿದರು.
ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವಿಕೆಯಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ, ಯೋಜನೆಗಳು ಅರ್ಹರಿಗೆ ತಲುಪದೇ, ಅನರ್ಹರ ಪಾಲಾಗುತ್ತಿವೆ. ಅಧಿಕಾರಿಗಳು ಅರ್ಹರನ್ನು ಗುರುತಿಸಿ, ಪಿಂಚಣಿ ನೀಡಬೇಕು. ಅನರ್ಹ ಫಲಾನುಭವಿಗಳನ್ನು ಸೌಲಭ್ಯದಿಂದ ತೆಗೆದು ಹಾಕಬೇಕು. ಸರ್ಕಾರ ಮೊದಲು ಇಂತಹ ಕೆಲಸ ಮಾಡಬೇಕು ಎಂದು ಬಸವರಾಜಯ್ಯ ಒತ್ತಾಯಿಸಿದರು.ಪಕ್ಷದ ಮುಖಂಡರಾದ ಟಿ.ಅಜ್ಜೇಶ, ಪುಟ್ಟಾನಾಯ್ಕ, ರೇವಣ್ಣ, ಹನುಮಂತಪ್ಪ, ಜಗದೀಶ, ಪ್ರಕಾಶ ಇತರರು ಇದ್ದರು.
- - --3ಕೆಡಿವಿಜಿ8: ದಾವಣಗೆರೆಯಲ್ಲಿ ಗುರುವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜಯ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.