ಸಾರಾಂಶ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನನಗೆ ಸಮಯ ನೀಡಿದ್ದರು, ಅವರ ಜೊತೆ ನಾನು ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ್ದೇನೆ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ನನಗೆ ತಿಳಿದ ಸಲಹೆಗಳನ್ನು ನೀಡಿದ್ದೇನೆ. ನಾನು ನೀಡಿದ ಮನವಿಗಳಿಗೆ ಸ್ಪಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಮರುನಾಮಕರಣ ಮಾಡಿದ್ದನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ಸೋಂಪುರ ಹೋಬಳಿಯ ಬೆಣಚನಹಳ್ಳಿ ಕಾಲೋನಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಹೆಸರು ಮರುನಾಮಕರಣಕ್ಕೆ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದ್ದು, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿಯಪ್ಪ, ಎಂಎಲ್ ಸಿ ರವಿ, ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ನಾನು ಸರ್ಕಾರಕ್ಕೆ ಮನವಿ ಮಾಡಿದ್ದೇವು. ನಮ್ಮ ಮನವಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.ರಾಜ್ಯದಲ್ಲಿ ಅಭಿವೃದ್ದಿ ಕ್ರಾಂತಿ:
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕಮಾರ್ ನೇತೃತ್ವದಲ್ಲಿ ಅಭಿವೃದ್ಧಿ ಕ್ರಾಂತಿಯಾಗುತ್ತಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಸೆಪ್ಟೆಂಬರ್ ನಂತರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿಯಾಗುವ ಬಗ್ಗೆ ಮಾಹಿತಿಯಿಲ್ಲ, ಹೇಳಿದವರನ್ನೇ ಕೇಳಬೇಕು ಎಂದರು.ಸರ್ಕಾರ ಸುಭದ್ರ:
ಮುಂದಿನ ದಿನಗಳಲ್ಲಿ ಏನಾದರೂ ಸಿಎಂ ವಿಚಾರ ಬಂದಾಗ ಎಲ್ಲಾ ಕಾಂಗ್ರೆಸ್ ಶಾಸಕರು ಸೇರಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ಗೆ ತಿಳಿಸುತ್ತೇವೆ. ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಐದು ಗ್ಯಾರಂಟಿಗಳ ಜೊತೆ ಅಭಿವೃದ್ಧಿ ಪಥದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ಅದು ಖಾಲಿ ಆದಾಗ ಸಮರ್ಥರಿಗೆ ನಮ್ಮ ಹೈಕಮಾಂಡ್ ಚರ್ಚಿಸಿ ನಿರ್ಧಾರ ಮಾಡಿ ಮುಖ್ಯಮಂತ್ರಿ ಪಟ್ಟ ಕಟ್ಟುತ್ತದೆ ಎಂದರು.ಸುರ್ಜೇವಾಲಾ ಜೊತೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನನಗೆ ಸಮಯ ನೀಡಿದ್ದರು, ಅವರ ಜೊತೆ ನಾನು ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ್ದೇನೆ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ನನಗೆ ತಿಳಿದ ಸಲಹೆಗಳನ್ನು ನೀಡಿದ್ದೇನೆ. ನಾನು ನೀಡಿದ ಮನವಿಗಳಿಗೆ ಸ್ಪಂದಿಸಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಗ್ರಾಪಂ ಸದಸ್ಯರಾದ ಧನಲಕ್ಷ್ಮೀ, ಸೋಮಲತಾ, ಪಿಡಿಒ ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಬಗರ್ ಹುಕುಂ ಸದಸ್ಯ ವಕೀಲ ಹನುಮಂತೇಗೌಡ್ರು, ಮುಖಂಡರಾದ ವಾಸುದೇವ್, ಪ್ರಕಾಶ್ ಬಾಬು ಸೇರಿ ಗ್ರಾಪಂ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.