ಬದುಕಿಗೆ ಮೌಲ್ಯ ನೀಡಿದ ರೇಣುಕಾಚಾರ್ಯರು: ಸುಗೂರೇಶ್ವರ ಶ್ರೀ

| Published : Mar 26 2024, 01:00 AM IST

ಸಾರಾಂಶ

ಯಾದಗಿರಿ ನಗರದ ಲಕ್ಷ್ಮೀ ನಗರದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ಯುಗಮಾನೋತ್ಸವ ಕಾರ್ಯಕ್ರಮದ ಧರ್ಮಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಮಾಜದಲ್ಲಿ ಸಾಮರಸ್ಯ, ಶಾಂತಿ ಮೂಡಿಸಲು ರೇಣುಕಾಚಾರ್ಯರು ಶ್ರಮಿಸಿದರು ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಸುಗೂರೇಶ್ವರ ಶಿವಾಚಾರ್ಯರು ನುಡಿದರು.

ನಗರದ ಲಕ್ಷ್ಮೀ ನಗರದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ಯುಗಮಾನೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ರೇಣುಕಾಚಾರ್ಯರು ವೀರಶೈವ ಧರ್ಮದ ಸ್ಥಾಪಕರು. ಅವರು ಕೈಲಾಸದ ಪ್ರಮಥರಲ್ಲಿ ಒಬ್ಬರು. ಪಾಲ್ಕುರಿಕೆ ಸೋಮನಾಥನ ಗಣಸಹಸ್ರದಲ್ಲಿ ಪ್ರಮಥಗಣರಲ್ಲಿ ಇವರ ಉಲ್ಲೇಖವಿದೆ. ರೇಣುಕಾಚಾರ್ಯರನ್ನು ಕುರಿತು ಸಂಸ್ಕೃತದಲ್ಲಿ ರೇಣುಕಾಗಸ್ತ್ಯ ಎಂಬ ಗ್ರಂಥವಿದೆ. ಇದರಲ್ಲಿ ವೀರಶೈವ ಏಕೋತ್ತರ ಷಟಸ್ಥಲಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ ಎಂದರು.

ರೇಣುಕಾಚಾರ್ಯರು ರಚಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಮಾನವ ಬದುಕಿನ ಎಲ್ಲ ಸ್ಥರಗಳನ್ನು ಶುದ್ಧಿಗೊಳಿಸುವ ಸಂಸ್ಕಾರದ ಮಾರ್ಗಗಳಿವೆ. ಪ್ರತಿಯೊಬ್ಬರು ಧರ್ಮಾಚರಣೆಯಿಂದ ವಿಮುಖರಾಗದೇ ರೇಣುಕಾಚಾರ್ಯರರ ತತ್ವ ಸಿದ್ಧಾಂತ ಪಾಲಿಸಿ, ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.

ಧರ್ಮಸಭೆಯಲ್ಲಿ ಗುಂಬಳಾಪುರ ಮಠದ ಶ್ರೀಗಳು, ಶ್ರೀದಂಡಗುಂಡ ಮಠದ ಶ್ರೀಗಳು, ಚಟ್ನಳ್ಳಿ ಮಠದ ಶ್ರೀಗಳು, ಕೌಳೂರು ಮಠದ ಶ್ರೀಗಳು ಹಾಗೂ ಲಿಂಗೇರಿ ಸ್ಟೇಷನ್ ಮಠದ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಇದಕ್ಕೂ ಮುನ್ನ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ಯುಗಮಾನೋತ್ಸವ ಸಮಿತಿಯಿಂದ ಜಗದ್ಗುರು ರೇಣುಕಾಚಾರ್ಯರರ ಭಾವಚಿತ್ರ ಶೋಭಾಯಾತ್ರೆ ಜರುಗಿತು. ಜಿಲ್ಲೆಯ ಗಣ್ಯ ವ್ಯಕ್ತಿಗಳು, ಸಮಾಜದ ಮುಖಂಡರು, ಮಹಿಳೆಯರು ಹಾಗೂ ಸಹಸ್ರಾರು ಜನರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.