ಸಾರಾಂಶ
ನೀರು ಪೋಲಾಗದಂತೆ ತಾತ್ಕಾಲಿಕ ದುರಸ್ತಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿ ಅನುಮೋದನೆ ಪಡೆದುಕೊಂಡು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುಮಠಕಲ್ ಮತಕ್ಷೇತ್ರದ ಜಿನಕೇರಿ ಗ್ರಾಮದ ಕೆರೆ ಕೋಡಿ ಮತ್ತು ತೂಬು ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿ ರೈತರಿಗೆ ಆತಂಕ ತಂದೊಡ್ಡಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನಡೆಸಿದ ಪ್ರತಿಭಟನೆಗೆ ಸ್ಪಂದಿಸಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲಿಸಿ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸಾಕಷ್ಟು ಬಾರಿ ಸಮಸ್ಯೆ ಬಗ್ಗೆ ಮನವಿ ಮಾಡಿದರೂ ಸ್ಪಂದಿಸದೇ ಇರುವುದರಿಂದ ಸಮಸ್ಯೆಯಾಗಿತ್ತು ಎಂದು ಕಿಡಿಕಾರಿದರು.
ಉಮೇಶ ಮುದ್ನಾಳ ಮಾತನಾಡಿ, ರೈತರ ಜೀವನಾಡಿಯಾಗಿರುವ ಕೆರೆ ರಕ್ಷಣೆ ಮಾಡುವುದು ಅಧಿಕಾರಿಗಳ ಜವಬ್ದಾರಿ, ರೈತರೇ ಬೆನ್ನೆಲುಬು ಎನ್ನುತ್ತಿರಿ. ಆದರೆ, ರೈತರ ಕೆಲಸ ಮಾಡುವುದಿಲ್ಲ. ರೈತರು ಅನ್ನ ಬೆಳೆಯದಿದ್ದರೆ ಅಧಿಕಾರಿಗಳು ಮಣ್ಣು ತಿನ್ನಬೇಕಾಗುತ್ತದೆ ಎಂದು ಗುಡುಗಿದರು.ನೀರು ಪೋಲಾಗದಂತೆ ತಾತ್ಕಾಲಿಕ ದುರಸ್ತಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿ ಅನುಮೋದನೆ ಪಡೆದುಕೊಂಡು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಇದಲ್ಲದೇ ಕರೆಯ ಒಡ್ಡಿನ ಮೇಲೆ ಗಿಡಗಂಟಿಗಳು ಬೆಳೆದಿವೆ. ಒಡ್ಡಿನ ಮೇಲೆ ಹಿಂದೆ ಜನ ಹೊಲಕ್ಕೆ ಹೋಗುತ್ತಿದ್ದರು. ಇದು ಈಗ ಬಂದಾಗಿದೆ. ಕೂಡಲೇ ಜಂಗಲ್ ಕಟಿಂಗ್ ಸಹ ಮಾಡಬೇಕು ಎಂದಾಗ ಈ ಸಮಸ್ಯೆ ಗ್ರಾಪಂ ಪಿಡಿಓ ಅವರಿಗೆ ಸಂಬಂಧಿಸಿದೆ ಎಂದು ತಿಳಿಸಿದರು. ತಕ್ಷಣ ಕೌಳೂರು ಗ್ರಾಪಂ ಪಿಡಿಓ ಆವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿದಾಗ ಅವರು ತಕ್ಷಣ ಜಂಗಲ್ ಕಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸುಮಾರು ಒಂದು ತಾಸು ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ದೂರಿದ ರೈತರು, ಮೇಲಧಿಕಾರಿಗಳನ್ನು ಕರೆಸುವಂತೆ ಪಟ್ಟು ಹಿಡಿದರು. ಆಗ ದೂರವಾಣಿ ಮುಖಾಂತರ ಮೇಲಧಿಕಾರಿಗಳು ಸಂಪರ್ಕಕ್ಕೆ ಬಂದು, ಎಲ್ಲ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ನಂತರ ರೈತರು ಶಾಂತರಾದರು.
ರಫೀಕ್ ಪಟೇಲ್, ಕಾಶಪ್ಪ ಹೊಸಮನಿ, ಮರೆಪ್ಪ ಅಂಬಿಗೇರ, ತಾಯಪ್ಪ, ಸಾಬಣ್ಣ ನೀಲಳ್ಳಿ, ರಫೀ ಮಸ್ಕನಳ್ಳಿ, ಚಂದ್ರಾಮ, ಆದಿಸಾಬ, ಬಾಲಪ್ಪ, ಶರಣಪ್ಪ, ತಾಯಪ್ಪ ದುಗನೂರು, ಹಣಮಂತ, ನಿಂಗಪ್ಪ, ಭೀಮರಾಯ ಬಾವಾರ, ಲಕ್ಷ್ಮಣ, ಮಲ್ಲಪ್ಪ., ಮರೆಪ್ಪ ಇತರರಿದ್ದರು.