ಸಾರಾಂಶ
ರಾಜ್ಯ ಸರ್ಕಾರದ ಆಣತಿಯಂತೆ ಪ್ರತಿ ಮನೆಗಳಿಗೆ ನಮ್ಮ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಪೊಲೀಸರು ಮನೆ ಬಾಗಿಲಿಗೆ ಬಂದಾಗ ಯಾವುದೇ ಕುಟುಂಬ ಸದಸ್ಯರು ಹೆದರದೇ, ನಿಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ನಗರ ಠಾಣೆ ಇನ್‌ಸ್ಪೆಕ್ಟರ್ ರಾಜಾಸಾಬ್ ಫಕ್ರುದ್ದೀನ್ ದೇಸಾಯಿ ಹೇಳಿದ್ದಾರೆ.
- ಹರಿಹರ ನಗರ ಠಾಣೆ ಇನ್‌ಸ್ಪೆಕ್ಟರ್ ರಾಜಾಸಾಬ್ ಫಕ್ರುದ್ದೀನ್ ದೇಸಾಯಿ ಮನವಿ
- - -ಕನ್ನಡಪ್ರಭ ವಾರ್ತೆ ಹರಿಹರ
ರಾಜ್ಯ ಸರ್ಕಾರದ ಆಣತಿಯಂತೆ ಪ್ರತಿ ಮನೆಗಳಿಗೆ ನಮ್ಮ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಪೊಲೀಸರು ಮನೆ ಬಾಗಿಲಿಗೆ ಬಂದಾಗ ಯಾವುದೇ ಕುಟುಂಬ ಸದಸ್ಯರು ಹೆದರದೇ, ನಿಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ನಗರ ಠಾಣೆ ಇನ್‌ಸ್ಪೆಕ್ಟರ್ ರಾಜಾಸಾಬ್ ಫಕ್ರುದ್ದೀನ್ ದೇಸಾಯಿ ಹೇಳಿದರು.ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಮನೆಮನೆಗೆ ಪೊಲೀಸ್ ಯೋಜನೆ ಜಾರಿ ಕಾರ್ಯಕ್ರಮಕ್ಕೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಗೃಹ ಸಚಿವರು, ಸಾರ್ವಜನಿಕರ ಸುರಕ್ಷತೆ ಹಿನ್ನೆಲೆ ಮನೆ ಮನೆಗೆ ಪೊಲೀಸ್ ಎಂಬ ನೂತನ ಕಾರ್ಯಕ್ರಮ ಜಾರಿಗೊಳಿಸಿದೆ. ಅತಿ ಶೀಘ್ರದಲ್ಲೇ ಹರಿಹರ ನಗರದ ಪ್ರತಿ ವಾರ್ಡ್ ಬಡಾವಣೆಗಳಿಗೆ ಪೊಲೀಸರು ಆಗಮಿಸಿ, ಪ್ರತಿ ಮನೆಗಳ ಹಿರಿಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಸಾರ್ವಜನಿಕರು ಮಾಹಿತಿ ಹಂಚಿಕೊಂಡು ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಇಲಾಖೆಯೊಂದಿಗೆ ಸಹಕರಿಸಲು ವಿನಂತಿಸಿದರು.ಪ್ರಸ್ತುತ ಯೋಜನೆಯಿಂದ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟಾಗಲಿದೆ. ಸಾರ್ವಜನಿಕರ ಜೊತೆ ನೇರ ಸಂಪರ್ಕ ಜನಸಾಮಾನ್ಯರ ಸಮಸ್ಯೆಗಳ ಅರಿವು ಹಾಗೂ ಅವುಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತದೆ. ಸಾಮಾಜಿಕ ನ್ಯಾಯ ಭದ್ರತೆ ಮತ್ತು ಸಾರ್ವಜನಿಕರ ವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.
ಕುಟುಂಬದ ಸದಸ್ಯರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗುತ್ತಿದೆಯೇ, ದಾಖಲಾಗಿದ್ದರೆ ಅವು ಯಾವ ಹಂತದಲ್ಲಿವೆ, ಇಲಾಖೆಗೆ ಸಂಬಂಧಿಸಿದಂತೆ ಅವರಿಗೆ ನ್ಯಾಯ ಸಿಕ್ಕಿದೆಯೇ, ಸಾರ್ವಜನಿಕ ತೊಂದರೆಗಳು, ಸ್ಥಳೀಯ ದೂರುಗಳು, ಸುರಕ್ಷತೆ ಬಗ್ಗೆ ವಿಚಾರಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಲಿದೆ. ಸೈಬರ್ ಅಪರಾಧ, ಮಾದಕ ವಸ್ತು ಡ್ರಗ್ಸ್ ಜಾಲ, ಅಪರಾಧ, ಮನೆ ಕಳ್ಳತನ, ಸರ ಕಳ್ಳತನ, ಸಂಚಾರಿ ನಿಯಮ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ವಿವರಿಸಿದರು.ನಗರ ಠಾಣೆ ಪಿಎಸ್‍ಐ ಶ್ರೀಪತಿ ಗಿನ್ನಿ, ಎಎಸ್‍ಐ. ರಾಜಶೇಖರ್, ಪೊಲೀಸ್ ಅಧಿಕಾರಿಗಳಾದ ಕಾನ್‌ಸ್ಟೇಬಲ್ ರವಿ, ಚಮನ್ ಐರಣಿ, ಕಾಂತರಾಜ್, ರಂಗರೆಡ್ಡಿ, ಇಲಾಖೆ ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.
- - --14ಎಚ್‍ಆರ್‍ಆರ್02:
ಹರಿಹರದಲ್ಲಿ ಮನೆ ಮನೆಗೆ ಪೊಲೀಸ್ ಯೋಜನೆ ಜಾರಿ ಕಾರ್ಯಕ್ರಮಕ್ಕೆ ಧ್ವನಿವರ್ಧಕ ಮೂಲಕ ಚಾಲನೆ ನೀಡಲಾಯಿತು.