ಏನ್ರಿ ನಿಮಗೆ ಏನಾಗಿದೆ. ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ, ನಿಮಗೆ ಲಕ್ಷಾಂತರ ರುಪಾಯಿ ಸಂಬಳ ನೀಡಿದರೂ ಸರಿಯಾಗಿ ಸೇವೆ ನೀಡಲು ಯಾಕೆ ಆಗುತ್ತಿಲ್ಲ. ಆಪರೇಶನ್‌ಗಾಗಿ ತಿಂಗಳಾನುಗಟ್ಟಲೇ ಕಾಯಬೇಕು ಎಂದರೇ ಏನರ್ಥ.

- ರೋಗಿಗಳಿಗೆ ಸೇವೆ ನೀಡದ ನಿಮ್ಮಂತವರು ಇದ್ದರೇನು ಪ್ರಯೋಜನ

- ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡಪ್ರಭ ವರದಿ ಪ್ರತಿಧ್ವನಿ

- ಇದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲಕನ್ನಡಪ್ರಭ ವಾರ್ತೆ ಕೊಪ್ಪಳ

ಏನ್ರಿ ನಿಮಗೆ ಏನಾಗಿದೆ. ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ, ನಿಮಗೆ ಲಕ್ಷಾಂತರ ರುಪಾಯಿ ಸಂಬಳ ನೀಡಿದರೂ ಸರಿಯಾಗಿ ಸೇವೆ ನೀಡಲು ಯಾಕೆ ಆಗುತ್ತಿಲ್ಲ. ಆಪರೇಶನ್‌ಗಾಗಿ ತಿಂಗಳಾನುಗಟ್ಟಲೇ ಕಾಯಬೇಕು ಎಂದರೇ ಏನರ್ಥ, ಇದನ್ನು ಸಹಿಸಿಕೊಂಡು ಇರಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಕಿಮ್ಸ್ ನಿರ್ದೇಶಕರ ವಿರುದ್ಧ ದೊಡ್ಡ ಆರೋಪಗಳೇ ಇವೆ. ಹಣದ ಅಕ್ರಮವೂ ನಡೆದ ಬಗ್ಗೆ ಮಾಹಿತಿ ಇದೆ. ಹೀಗಾಗಿ, ನಿಮ್ಮ ವಿರುದ್ಧ ಸರ್ಕಾರಕ್ಕೆ ವರದಿ ಮಾಡಿ, ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಡಕ್ ಎಚ್ಚರಿಕೆ ನೀಡಿದರು.

ಜಿಪಂನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕಿಮ್ಸ್ ಕುರಿತು ಪ್ರಗತಿ ಪರಿಶೀಲನಾ ವೇಳೆಯಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕನ್ನಡಪ್ರಭ ಪತ್ರಿಕೆಯ ವರದಿಯ ಪ್ರತಿ ಪ್ರದರ್ಶನ ಮಾಡಿ, ನೋಡಿ ನಿಮ್ಮ ಕುರಿತು ಎಲ್ಲ ವರದಿ ಮಾಡಲಾಗಿದೆ ಎಂದು ಹೇಳುತ್ತಿದ್ದಂತೆ ಕೆಂಡಮಂಡಲವಾದ ಸಚಿವರು, ನನ್ನ ಬಳಿಯೂ ಇವೆಲ್ಲ ಇವೆ ಎಂದು ಕಿಮ್ಸ್ ನಿರ್ದೇಶಕ ವಿಜಯ ಇಟಗಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಿಮ್ಸ್‌ನಲ್ಲಿ ನಡೆಯುತ್ತಿರುವಾದರೂ ಏನು, ಏನು ಮಾಡುತ್ತಿದ್ದೀರಿ, ಆಸ್ಪತ್ರೆಯಲ್ಲಿಯೂ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಮೂರು ತಿಂಗಳು ಕಾಲ ಆಪರೇಶನ್‌ಗಾಗಿ ಕಾಯಬೇಕು ಎಂದರೇ ಏನರ್ಥ ಎಂದು ಕಿಡಿಕಾರಿದರು.

ಇಂಥ ಕೆಟ್ಟ ವ್ಯವಸ್ಥೆಯನ್ನು ನಾನು ನೋಡಿಯೇ ಇಲ್ಲ. ಪತ್ರಿಕೆಗಳಲ್ಲಿ ನಿಮ್ಮೆ ಕಾರ್ಯವೈಖರಿಯನ್ನು ವರದಿ ಮಾಡಲಾಗಿದೆ. ನೀವೇ ನಿಮ್ಮ ಬೆನ್ನು ಚಪ್ಪರಿಸಿಕೊಳ್ಳುವುದನ್ನು ಬಿಡಿ ಎಂದರು.

ಆಗಾಗ ಕಿಮ್ಸ್ ನಿರ್ದೇಶಕರು ಸತ್ಯವನ್ನು ಹೇಳಲಾ ಎಂದು ಹೇಳಲು ಮುಂದಾಗುತ್ತಿದ್ದಂತೆ ಸಚಿವರು ಅಯ್ಯಾ ನೀನು ಮೋದಲು ನಾನು ಹೇಳುವುದನ್ನ ಕೇಳು ಎಂದು ತಾಕೀತು ಮಾಡುತ್ತಿದ್ದರು.

ನಾನು ಆಸ್ಪತ್ರೆಗೆ ಬಂದಾಗಲೂ ಇದೇ ಕತೆಯಾಗಿದೆ. ಅಲ್ಲಿ ರೋಗಿಗಳು ಪಡುತ್ತಿರುವ ಯಾತನೆ ಹೇಳತೀರದು. ಇಂಥ ಸೇವೆಯನ್ನು ನೀಡುವುದಕ್ಕೆ ನಿಮಗೆ ವೇತನ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.

ವೈದ್ಯಕೀಯ ಶಿಕ್ಷಣ ಸಂಸ್ಥೆಯ ನವೀಕರಣ ಸಹ ಮಾಡಿಸಿಲ್ಲ, ಕಳೆದ ಐದು ವರ್ಷಗಳಿಂದ ಯಾಕೆ ನವೀಕರಣ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಇದಕ್ಕಾಗಿ ಈಗ ಸಂಸ್ಥೆ ₹35 ಲಕ್ಷ ದಂಡ ತೆರಬೇಕಾಗಿದೆ. ಇದನ್ನು ಯಾರು ಪಾವತಿ ಮಾಡಬೇಕು ಎಂದು ಸಚಿವರು ಪ್ರಶ್ನಿಸಿದರು.

ನಾಲ್ಕು ಲಕ್ಷ ರುಪಾಯಿ ಯಂತ್ರವನ್ನು ₹45 ಲಕ್ಷ ವೆಚ್ಚ ಮಾಡಿ ಖರೀದಿಸಿದ್ದೀರಿ, ಇದನ್ನು ಸಹ ತನಿಖೆ ಮಾಡಬೇಕಾಗಿದೆ. ಇಂಥ ಅದೆಷ್ಟೋ ಅಕ್ರಮಗಳು ನಡೆದಿವೆಯೋ ದೇವರೇ ಬಲ್ಲ. ಜಿಲ್ಲಾಧಿಕಾರಿಗಳೇ ಇದೆಲ್ಲವನ್ನು ಸಮಗ್ರವಾಗಿ ವರದಿ ಮಾಡಿ ಎಂದು ಸೂಚಿಸಿದರು.

ವೈದ್ಯಕೀಯ ಶಿಕ್ಷಣ ಸಚಿವರಿಗೆ, ನನಗೂ ವರದಿಯ ಪ್ರತಿ ಕಳುಹಿಸಿ, ಸರ್ಕಾರದ ಮಟ್ಟದಲ್ಲಿ ಮಾತನಾಡಿ, ಇವರ ವಿರುದ್ಧ ಕ್ರಮವಾಗುವಂತೆ ನಾನು ಮಾಡುತ್ತೇನೆ ಎಂದರು.

ಕನ್ನಡಪ್ರಭ ವರದಿಯ ಪ್ರತಿ ಪ್ರದರ್ಶನ ಮಾಡಿದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಸರ್ಕಾರ ಹಾಗೂ ನಿರ್ದೇಶಕರ ವಿರುದ್ಧ ಹರಿಹಾಯ್ದರು. ಕನ್ನಡಪ್ರಭದಲ್ಲಿ ಸಮಗ್ರವಾಗಿ ವರದಿ ಮಾಡಲಾಗಿದೆ. ನಮಗೆ ಸುಳ್ಳು ಹೇಳುವುದನ್ನು ಬಿಡಿ, ಕೇವಲ 7 ಐಸಿಯು ಬೆಡ್ ಇವೆಯಂತೆ, ಹಾಗಾದರೇ ತುರ್ತು ಚಿಕಿತ್ಸೆಗಾಗಿ ಬರುವವರಿಗೆ ಚಿಕಿತ್ಸೆಯಾದರೂ ಹೇಗೆ ದೊರೆಯುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲಾಸ್ಪತ್ರೆಗೆ ₹ 110 ಕೋಟಿ ಬರುತ್ತದೆ ಎಂದು ಹೇಳುತ್ತಿರಿ, ಹೀಗೆ ಬಂದ ದುಡ್ಡು ಹೇಗೆ ಖರ್ಚಾಗುತ್ತದೆ ಎಂದು ವಿವರ ನೀಡಿ ಎಂದು ಕೇಳಿದರು. ಎಲ್ಲ ಲೆಕ್ಕವನ್ನು ಹೇಳಿದರೂ ಹತ್ತಾರು ಕೋಟಿ ವ್ಯತ್ಯಾಸವಾಗುತ್ತದೆ ಎಂದು ಕಿಡಿಕಾರಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಆಸ್ಪತ್ರೆಯಲ್ಲಿ ಈ ಮೊದಲು ಉತ್ತಮ ಚಿಕಿತ್ಸೆ ದೊರೆಯುತ್ತಿತ್ತು. ಈಗ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ. ಹೀಗಾದರೇ ಜನರ ಗತಿ ಏನು ಎಂದು ಪ್ರಶ್ನೆ ಮಾಡಿದರು.

ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ ಇದ್ದರು.