ಹಾರುಗೊಪ್ಪಹಳ್ಳ ಸೇತುವೆ ದುರಸ್ತಿಗೆ ಮನವಿ

| Published : Aug 03 2024, 12:32 AM IST

ಸಾರಾಂಶ

ಶೃಂಗೇರಿ, ಮಳೆಗಾಲದಲ್ಲಿ ಸದಾ ಮುಳುಗಡೆಯಾಗುತ್ತಾ ಗ್ರಾಮಸ್ಥರ ಸಂಚಾರಕ್ಕೆ ಕಂಟಕವಾಗುತ್ತಿರುವ ಬೇಗಾರು ಗ್ರಾಮದ ಬೇಗಾರು ತಾರೊಳ್ಳಿ ಕೊಡಿಗೆ ಬೈಲ್ ಬಾರ್ ಸಂಪರ್ಕ ಹಾರೊಗೊಪ್ಪ ಸೇತುವ ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿ ತಾರೊಳ್ಳಿ ಕೊಡಿಗೆ, ಬೈಲ್ ಬಾರ್, ಕೋಟೆ, ಶುಂಠಿಹಕ್ಲು ಗ್ರಾಮಸ್ಥರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಳೆಗಾಲದಲ್ಲಿ ಸದಾ ಮುಳುಗಡೆಯಾಗುತ್ತಾ ಗ್ರಾಮಸ್ಥರ ಸಂಚಾರಕ್ಕೆ ಕಂಟಕವಾಗುತ್ತಿರುವ ಬೇಗಾರು ಗ್ರಾಮದ ಬೇಗಾರು ತಾರೊಳ್ಳಿ ಕೊಡಿಗೆ ಬೈಲ್ ಬಾರ್ ಸಂಪರ್ಕ ಹಾರೊಗೊಪ್ಪ ಸೇತುವ ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿ ತಾರೊಳ್ಳಿ ಕೊಡಿಗೆ, ಬೈಲ್ ಬಾರ್, ಕೋಟೆ, ಶುಂಠಿಹಕ್ಲು ಗ್ರಾಮಸ್ಥರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಣ್ಣಾದೊರೆ ಕಳೆದ ದಶಕಗಳಿಂದ ಇಲ್ಲಿ ಶಾಶ್ವತ ರಸ್ತೆಯಾಗಲೀ, ಸೇತುವೆ ಯಾಗಲೀ ದುರಸ್ತಿಯಾಗಿಲ್ಲ. ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಸರ್ಕಾರಗಳು ಬದಲಾದರೂ ಇಲ್ಲಿಯ ರಸ್ತೆ, ಸೇತುವೆ ದುರಸ್ತಿ ಕಂಡಿಲ್ಲ. ಮಳೆಗಾಲದಲ್ಲಿ ಹಾರೊಗೊಪ್ಪ ಹಳ್ಳ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ದಿನ ಗಟ್ಟಲೇ ಪ್ರವಾಹದ ನೀರು ನಿಲ್ಲುತ್ತದೆ. ಗ್ರಾಮಸ್ಥರಿಗೆ ಪರ್ಯಾಯ ರಸ್ತೆ ವ್ಯವಸ್ಥೆಯಿಲ್ಲ. ಪ್ರವಾಹ ಉಂಟಾದಾಗ ಕೆಲವೊಮ್ಮೆ 2-3 ದಿನಗಳವರೆಗೂ ನೀರು ನಿಂತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ತುರ್ತು ಕೆಲಸಗಳಿಗೆ ತೀವ್ರ ತೊಂದರೆ ಯಾಗುತ್ತದೆ.

ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಗೆ ನೀರು ಉಕ್ಕಿ ಹರಿದಾಗ ಶಾಲಾ ಬಾಲಕಿಯೊಬ್ಬಳು ಕಾಲುಜಾರಿ ಬಿದ್ದು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಳು. ಇತ್ತಿಚೆಗೆ ಹೃದಯಘಾತಕ್ಕೊಳಗಾದ ವ್ಯಕ್ತಿಯೊಬ್ಬರಿಗೆ ತುರ್ತು ಚಿಕಿತ್ಸೆಗೂ ಪರದಾಡು ವಂತಹ ಘಟನೆ ನಡೆದಿತ್ತು. ಇಂತಹ ಘಟನೆಗಳು ನಡೆಯುತ್ತಿದ್ದರೂ ಈ ವರೆಗೂ ಯಾವುದೇ ಸರ್ಕಾರ, ಜನಪ್ರತಿನಿಧಿಗಳು ಇತ್ತ ಗಮನ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು,

ಇದು ನಕ್ಸಲ್ ಪೀಡಿತ ಪ್ರದೇಶವಾಗಿದ್ದರೂ ಸರ್ಕಾರದ ನಕ್ಸಲ್ ಪ್ಯಾಕೇಜ್ ಯಾವುದೂ ಬಂದಿಲ್ಲ. ಗಿರಿಜನ ಅಭಿವೃದ್ಧಿ ಯೋಜನೆಯಡಿ ಯಾವುದೇ ಅನುದಾನ ತಲುಪಿಲ್ಲ. ಸರ್ಕಾರ ಕೂಡಲೇ ಹೊಸ ಸೇತುವೆ ನಿರ್ಮಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕ್ರಪ್ಪ ಮಾತನಾಡಿ ಸುತ್ತಮುತ್ತಲು ಸುಮಾರು 150ಕ್ಕೂ ಹೆಚ್ಚು ಕುಟುಂಬಗಳಿದ್ದು ಇವರಿಗೆ ಅಗತ್ಯ ಮೂಲಭೂತ ಸೌಕರ್ಯಗಳೇ ಇಲ್ಲ. ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಸರ್ಕಾರ ಕೂಡಲೇ ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೋಟೆ ಗ್ರಾಮಸ್ಥರಾದ ವೆಂಕಟೇಶ್, ಪ್ರದೀಪ್, ಗಣಪತಿ, ತಾರೊಳ್ಳಿ ಕೊಡಿಗೆ ರೇನಣ್ಣ, ಬೈಲ್ಬಾರ್ ಪ್ರಕಾಶ್ ಮತ್ತಿತರರು ಇದ್ದರು.

2 ಶ್ರೀ ಚಿತ್ರ 3-

ಶೃಂಗೇರಿ ತಾಲೂಕು ಕಚೇರಿಯಲ್ಲಿ ತಾರೊಳ್ಳಿಕೊಡಿಗೆ ಕೋಟೆ ಸುತ್ತಮುತ್ತಲಿನ ಗ್ರಾಮಸ್ಥರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.