ಖಾಸಗೀಲಿ ಕನ್ನಡಿಗರಿಗೆ ೧೦೦% ಮೀಸಲಿಗೆ ಸಿಎಂಗೆ ಮನವಿ

| Published : Jul 21 2024, 01:28 AM IST

ಖಾಸಗೀಲಿ ಕನ್ನಡಿಗರಿಗೆ ೧೦೦% ಮೀಸಲಿಗೆ ಸಿಎಂಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಲ್ಲಿ ಮೂಲ ಸ್ಥಳೀಯ ಕನ್ನಡಿಗರಿಗೆ ಶೇ.೧೦೦ರಷ್ಟು ಉದ್ಯೋಗ ಮೀಸಲಾತಿ ಜಾರಿಗೆ ಆಗ್ರಹಿಸಿ ಕರವೇ ಪ್ರವೀಣ್‌ಶೆಟ್ಟಿ ಬಣ ಜಿಲ್ಲಾ ಸಮಿತಿಯಿಂದ ಚಾಮರಾನಗರದ ಜಿ.ಪಂ.ಮುಖ್ಯ ಕಾರ್ಯನಿರ್ವಾಧಿಕಾರಿ ಮೊನಾರೋತ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಲ್ಲಿ ಮೂಲ ಸ್ಥಳೀಯ ಕನ್ನಡಿಗರಿಗೆ ಶೇ.೧೦೦ರಷ್ಟು ಉದ್ಯೋಗ ಮೀಸಲಾತಿ ಜಾರಿಗೂಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಧಿಕಾರಿ ಮೊನಾರೋತ್ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಆರ್.ಮೋಹನ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಕರ್ನಾಟಕ ರಾಜ್ಯದ ಕೈಗಾರಿಕೆ, ಕಾರ್ಖಾನೆ ಮತ್ತು ಇತರೆ ಉದ್ದಿಮೆಗಳಲ್ಲಿ ಸ್ಥಳೀಯ ಕನ್ನಡಿಗ ಅಭ್ಯರ್ಥಿಗಳಿಗೆ ಉದ್ಯೋಗ ವಿಧೇಯಕ ೨೦೨೪ ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಗಿತ್ತು. ಸಿ ಮತ್ತು ಡಿ ದರ್ಜೆ ಉದ್ಯೋಗಗಳಲ್ಲಿ ಶೇ. ೧೦೦ ರಷ್ಠು ಸ್ಥಳೀಯ ಕನ್ನಡಿಗರಿಗೆ ಮೀಸಲು ಕಲ್ಪಿಸಬೇಕು. ಇದನ್ನು ನಿರ್ವಹಣೆ ಮಾಡಲು ನೋಡಲ್ ಏಜೆನ್ಸಿ ಸ್ಥಾಪಿಸಬೇಕು ಎಂದು ಹೇಳಿರುವುದಾಗಿ ಕೆಲವು ಮೂಲಗಳ ಮೂಲಕ ತಿಳಿದಿದ್ದು, ಕರಡು ವಿದೇಯಕ ಪ್ರತಿ ಸೂಪರ್ ವೈಜರ್, ವ್ಯವಸ್ಥಾಪಕ, ಟೆಕ್ನಿಕಲ್ ಆಡಳಿತ ಸೇರಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.೫೦ ರಷ್ಟು ಹಾಗೂ ಕ್ಲರ್ಕ್, ಕೌಶಲ್ಯ, ಅರೆಕೌಶಲ್ಯ ಗುತ್ತಿಗೆ ನೌಕರರಂತಹ ಹುದ್ದೆಗಳಲ್ಲಿ ಶೇ.೭೫ ರಷ್ಠು ಸ್ಥಳೀಯ ಕನ್ನಡಿಗರಿಗೆ ಮೀಸಲಿಡಬೇಕು ಎಂದು ಹೇಳಲಾಗಿತ್ತು. ಆದರೆ ನಂತರದಲ್ಲಿ ಖಾಸಗಿ ಕಂಪನಿಯ ಕೆಲವು ಮಾಲೀಕರು ಕರ್ನಾಟಕ ಮೂಲ ಸೌಲಭ್ಯಗಳನ್ನು ಪಡೆದುಕೊಂಡು ಇಲ್ಲಿಯ ಗಾಳಿ, ಬೆಳಕು, ಭೂಮಿಗಳನ್ನು ಪಡೆದುಕೊಂಡು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಇಂತಹ ಕಂಪನಿಗಳ ಮಾಲೀಕರು, ಬೃಹತ್ ಉದ್ದಿಮೆಗಳು ಕೆಲವು ಸಚಿವರ ಒತ್ತಡಕ್ಕೆ ಮಣಿದು ಸರ್ಕಾರವು ಮಂಡಿಸಿದ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಲ್ಲಿ ಶೇ.೧೦೦ ರಷ್ಟು ಕೊಡಲು ತೀರ್ಮಾನಿಸಿದ ವಿಧೇಯಕಕ್ಕೆ ರಾಜ್ಯ ಸರ್ಕಾರ ತಡೆ ತಂದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರ ಒತ್ತಡಕ್ಕೂ ಮಣಿಯದೆ ಸಚಿವ ಸಂಪುಟದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳಲ್ಲಿ ಶೇ. ೧೦೦ ರಷ್ಟು ಸ್ಥಳೀಯ ಕನ್ನಡಿಗರಿಗೆ ಮೀಸಲು ಜಾರಿ ಮಾಡಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಆರ್.ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಕೃಷ್ಣನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್‌ಪಾಷ, ಜಿಲ್ಲಾ ಉಪಾದ್ಯಕ್ಷರಾದ ವೆಂಕಟೇಶ್, ನಾಗೇಶ್‌ನಾಯಕ, ಸಂಘಟನಾ ಕಾರ್ಯದರ್ಶಿ ರವಿ, ಗುಂಡ್ಲುಪೇಟೆ ತಾಲೂಕು ಘಟಕದ ಕಾರ್ಯದರ್ಶಿ ರಾಜೇಶ್ ಇತರರು ಹಾಜರಿದ್ದರು.