ಜೀತವಿಮುಕ್ತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

| Published : Feb 27 2025, 12:34 AM IST

ಸಾರಾಂಶ

ಜೀತ ವಿಮುಕ್ತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೌಹಾರ್ದ ಕರ್ನಾಟಕ ಸಂಘಟನೆ, ಪರಿವರ್ತನಾ ಟ್ರಸ್ಟ್‌ ಹಾಗೂ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟಿಸಿ ತಹಸೀಲ್ದಾರ್‌ ಶಿರಿನ್ ತಾಜ್‌ಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ಜೀತ ವಿಮುಕ್ತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೌಹಾರ್ದ ಕರ್ನಾಟಕ ಸಂಘಟನೆ, ಪರಿವರ್ತನಾ ಟ್ರಸ್ಟ್‌ ಹಾಗೂ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟಿಸಿ ತಹಸೀಲ್ದಾರ್‌ ಶಿರಿನ್ ತಾಜ್‌ಗೆ ಮನವಿ ಪತ್ರ ಸಲ್ಲಿಸಿದರು.

ಸೌಹಾರ್ದ ಕರ್ನಾಟಕ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಜೀವಿಕ ಮಂಜುನಾಥ್‌ ಮಾತನಾಡಿ, ಅಕ್ಟೋಬರ್‌ 25ಕ್ಕೆ ಜೀತ ಪದ್ಧತಿ ರದ್ಧತಿ ಕಾನೂನು ಜಾರಿಯಾಗಿ 48 ವರ್ಷ ಕಳೆದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ .ತಾಲೂಕಿನಲ್ಲಿ ಜೀತ ವಿಮುಕ್ತರಿಗೆ 2025-26 ರ ಬಜೆಟ್ನಲ್ಲಿ ತಲಾ 2ಲಕ್ಷ ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಜೀತವಿರುವ ಬಿಡುವವರ ಬಗ್ಗೆ ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲು ಇರುವ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆ ಕರೆಯುತ್ತಿಲ್ಲ. ಇನ್ನೊಂದು ವಾರದಲ್ಲಿ ಈ ಸಭೆ ಕರೆದು ಸಭೆ ನಡೆಸಬೇಕು. ಜೀತದಾಳಿಗೆ ರದ್ದುಪಡಿಸಿರುವ ಅಂತ್ಯೋದಯ ಕಾರ್ಡನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ದಲಿತಮುಖಂಡ ಎಚ್‌ಎಂಟಿ ನರಸೀಯಪ್ಪ ಮಾತನಾಡಿ, ಪ್ರತಿ ವರ್ಷ ಗ್ರಾಮ ಪಂಚಾಯಿತಿವಾರು ಜೀತದಾಳುಗಳನ್ನು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಪರಿಪಾಠ ತಾಲೂಕು ಮತ್ತು ಜಿಲ್ಲಾಧಿಕಾರಿಗಿದ್ದರು ಇದನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮರೆ ಮಾಚುತ್ತಿವೆ. ಸರ್ಕಾರದ ಬಜೆಟ್‌ ಸಮಯದಲ್ಲಿ ಜೀತ ಮುಕ್ತರಿಗೆ ಪುನರ್ವಸತಿ ಕಲ್ಪಿಸಲು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸರ್ಕಾರದ ಗಮನ ಸಳೆಯಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ. ಜೀತ ಪದ್ಧತಿ ಹೋಗಲಾಡಿಸಲು ಕರ್ನಾಟಕ ಸರ್ಕಾರ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಮಧುಗಿರಿ ತಾಲೂಕಿನ ಎಲ್ಲ ತಮಟೆ ಮತ್ತು ಚರ್ಮ ಕಲಾವಿದರಿಗೆ 10 ಸಾವಿರ ಮಾಸಾಶನ ಜಾರಿ ಮಾಡಬೇಕು. 2014ರಲ್ಲಿ 726 ಮಂದಿ ಜೀತ ವಿಮುಕ್ತರಿಗೆ ಪರಿಹಾರ ಮಂಜೂರಾಗಿ ವಿತರಿಸಿದ್ದು,ಉಳಿದ 64 ಮಂದಿಗೆ ತಲಾ 20 ಸಾವಿರದಂತೆ ವೃತ್ತಿ ಕೌಶಲ್ಯ ತರಬೇತಿ ನೀಡಿ ಅವರ ಖಾತೆಗೆ ವರ್ಗಾಯಸಿಬೇಕು ಎಂದರು.

ಬಗರ್ ಹುಕುಂ ಸಮಿತಿ ಸದಸ್ಯ ಸೊಸೈಟಿ ರಾಮಣ್ಣ, ಜೀವಿಕ ಸಂಘಟನೆಯ ಚಿಕ್ಕಮ್ಮ,ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ,ಸಿದ್ದಾಪುರ ಸಂಜೀವಯ್ಯ,ಅಂಜಿನಪ್ಪ,ದೊಡ್ಡೇರಿ ರಾಮಣ್ಣ,ಗಂಗಾಧರಪ್ಪ,ರಮೇಶ್‌ ಹಾಗೂ ಜೀತಮುಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.