ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

| Published : Mar 07 2024, 01:46 AM IST

ಸಾರಾಂಶ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ತಾಲೂಕು ಅಖಿಲ ಕರ್ನಾಟಕ ರೈತ ಸಂಘದಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಇ-ಸ್ವತ್ತು ಶುಲ್ಕದ ನಾಮಫಲಕ ಅಳವಡಿಸುವುದು, ಸಾತೇನಹಳ್ಳಿ ಗ್ರಾಪಂ ಕಾರ್ಯಾಲಯಕ್ಕೆ ಖಾಯಂ ಪಿಡಿಒ ಅಧಿಕಾರಿಯನ್ನು ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ತಾಲೂಕು ಅಖಿಲ ಕರ್ನಾಟಕ ರೈತ ಸಂಘದಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದಿವಗೀಹಳ್ಳಿ ಮಾತನಾಡಿ, ಆ.೧೨, ೨೦೨೩ ರಂದು ತಾಪಂ ಇಒ ಅವರಿಗೆ ಇ-ಸ್ವತ್ತು ನಾಮಫಲಕ ಬೇಡಿಕೆ ಮನವಿ ಸಲ್ಲಿಸಲಾಗಿತ್ತು. ತಕ್ಷಣವೇ ೧೩ರಂದು ಇ-ಸ್ವತ್ತು ಶುಲ್ಕ ₹೫೦ ನಾಮಫಲಕ ಅಳವಡಿಸುವಂತೆ ತಾಲೂಕಿನ ೧೯ ಗ್ರಾಮ ಪಂಚಾಯತಿಗಳಿಗೆ ಆದೇಶ ಮಾಡಿ ೬ ತಿಂಗಳು ಕಳೆದರೂ ನಾಮಫಲಕ ಹಾಕದೇ ಜನರಿಂದ ₹೩ ರಿಂದ ೪ ಸಾವಿರ ಹಣ ವಸೂಲಿ ಮಾಡುತ್ತಿದ್ದು, ಇದು ಖಂಡನೀಯ. ತಾಲೂಕಿನ ಎಲ್ಲ ಗ್ರಾಪಂಗಳಿಗೆ ಇ-ಸ್ವತ್ತು ಶುಲ್ಕದ ಫಲಕವನ್ನು ತಕ್ಷಣವೇ ಅಳವಡಿಸಬೇಕು. ತಾಲೂಕಿನ ಸಾತೇನಹಳ್ಳಿ ಅಭಿವೃದ್ಧಿ ಅಧಿಕಾರಿಯನ್ನು ಬದಲಾವಣೆ ಮಾಡಿ ಖಾಯಂ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಬೇಕು. ಹಿರೇಕೆರೂರಿನ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರು ರೈತರಿಗೆ ಹೈನುಗಾರಿಕೆಯ ಕೆಸಿಸಿ ಸಾಲವನ್ನು ನೀಡದೇ ತಾರತಮ್ಯ ಅನುಸರಿಸುತ್ತಿದ್ದಾರೆ ಮತ್ತು ರೈತರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿರುವ ನಮ್ಮ ಈ ಬೇಡಿಕೆಯನ್ನು ೧೦ ದಿನಗಳೊಳಗೆ ಈಡೇರಿಸಬೇಕು. ವಿಳಂಬ ಮಾಡಿದರೆ ಉಗ್ರ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಮಲ್ಲಮ್ಮ ಹುಲ್ಲಿನಕೊಪ್ಪ, ತಾಲೂಕು ಮಹಿಳಾ ರೈತ ಸಂಘದ ಕಾರ್ಯದರ್ಶಿ ಕಾವ್ಯಾ ಹುಡೇದ, ಜಿಲ್ಲಾಧ್ಯಕ್ಷ ಚಂದ್ರಪ್ಪ ಮಾನೇರ, ಲಲಿತಮ್ಮ ಹಿರೇಮಠ, ಲತಾ ನಿಂಗಮ್ಮನವರ, ಪೂಜಾರ ಮ್ಯಾಚರ, ಗುತ್ತೆಮ್ಮ ಸುಣಗಾರ, ಕವಿತಾ ಕಮತಳ್ಳಿ, ರೇಖಾ ಅಡಗಂಟಿ, ಕವಿತಾ ಇಳಗೇರಿ, ಗೀತಾ ಅಂಗಡಿ, ಸುನೀತಾ ಗೋಪಾಳ, ಮಾಯಮ್ಮ ಡೊಳ್ಳೇರ ಇದ್ದರು.