ಸಾರಾಂಶ
ಮಂಡ್ಯ ಅಥವಾ ಮದ್ದೂರು ತಾಲೂಕಿನಲ್ಲಿ ಕೇವಲ ಸಣ್ಣಪುಟ್ಟ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ಬೃಹತ್ ಕೈಗಾರಿಕೆ ತೆರೆಯುವುದರಿಂದ ಸಣ್ಣ ಕೈಗಾರಿಕೆಗಳ ಬೆಳವಣಿಗೆಯೊಂದಿಗೆ ಉದ್ಯೋಗ ಸೃಷ್ಟಿಗೂ ಸಾಧ್ಯವಾಗುತ್ತದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಮತ್ತು ಮದ್ದೂರು ಭಾಗದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಕೈಗಾರಿಕಾ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುವುದಾಗಿ ಮಾಜಿ ಸಚಿವ ಡಿ.ಸಿ .ತಮ್ಮಣ್ಣ ಶುಕ್ರವಾರ ಹೇಳಿದರು.ಪಟ್ಟಣದ ಲೀಲಾವತಿ ಬಡಾವಣೆಯ ತಮ್ಮ ನಿವಾಸದಲ್ಲಿ ಮದ್ದೂರು ಪಿ.ಕಾರ್ಡ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಕೆ.ಬಿ.ಸಿದ್ದೇಗೌಡರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮದ್ದೂರು ಮತ್ತು ಮಂಡ್ಯ ತಾಲೂಕಿನಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಅವಕಾಶಗಳಿವೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ವಿದ್ಯಾವಂತರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.ಮಂಡ್ಯ ಅಥವಾ ಮದ್ದೂರು ತಾಲೂಕಿನಲ್ಲಿ ಕೇವಲ ಸಣ್ಣಪುಟ್ಟ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಹೀಗಾಗಿ ಬೃಹತ್ ಕೈಗಾರಿಕೆ ತೆರೆಯುವುದರಿಂದ ಸಣ್ಣ ಕೈಗಾರಿಕೆಗಳ ಬೆಳವಣಿಗೆಯೊಂದಿಗೆ ಉದ್ಯೋಗ ಸೃಷ್ಟಿಗೂ ಸಾಧ್ಯವಾಗುತ್ತದೆ ಎಂದರು.
ಈ ಸಂಬಂಧ ನಾನು ಈಗಾಗಲೇ ಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿದ್ದಾಗ ಅವರನ್ನು ಭೇಟಿಯಾಗಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಕುರಿತಂತೆ ಮನವಿ ಮಾಡುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮುಖ್ಯಮಂತ್ರಿ ಬದಲಾವಣೆ ತೀರ್ಮಾನ ಕೈಗೊಳ್ಳುವುದು ಕಾಂಗ್ರೆಸ್ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. ಇದರಲ್ಲಿ ನಾನು ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.ಈ ಹಿಂದೆ ಎಲ್ಲಾ ಮಠಾಧೀಶರು ತಮ್ಮ ಜಾತಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಪ್ರತಿಭಟನೆ ಮತ್ತು ಧರಣಿ ನಡೆಸಿದ ಉದಾರಹರಣೆಗಳಿವೆ. ಈಗ ಚಂದ್ರಶೇಖರನಾಥ ಸ್ವಾಮೀಜಿ ಅವರ ಹೇಳಿಕೆಯಲ್ಲಿ ಯಾವುದೇ ಹೊಸತನವಿಲ್ಲ ಎನ್ನುವ ಮೂಲಕ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೂಕ್ತ ಉತ್ತರ ನೀಡದೆ ಜಾರಿಕೊಂಡರು.
ಈ ವೇಳೆ ಪಿಕಾರ್ಡ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸಿ.ಎನ್.ಕೆಂಪೇಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಮುತ್ತುರಾಜು, ಮಹದೇವಯ್ಯ, ರಾಜಶೇಖರ್, ಸವಿತಾ, ಗೌರಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಸಂದ್ರ ರವಿ, ಅವಿನಂದನ್, ವಿನಯ್ ಮತ್ತಿತರರು ಇದ್ದರು.