ತಂಝೀಂ ಈದ್ ಸೌಹಾರ್ದ ಕೂಟದಲ್ಲಿ ನಗರದ ಸಮಸ್ಯೆ ಕುರಿತು ವಿಸ್ತ್ರತ ಚರ್ಚೆ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿನ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ವತಿಯಿಂದ ಪಟ್ಟಣದ ಆಮೀನಾ ಪ್ಯಾಲೇಸ್‌ನಲ್ಲಿ ಆಯೋಜಿಸಲಾದ ಈದ್ ಸೌಹಾರ್ದ ಕೂಟದಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಸಮಸ್ಯೆಗಳು ಹಾಗೂ ಸಾಮಾಜಿಕ ಶಿಸ್ತು ಕುರಿತಂತೆ ಆಡಳಿತ ಮತ್ತು ಸಾರ್ವಜನಿಕರ ನಡುವೆ ಚರ್ಚೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಂಝೀಮ್ ಸಂಸ್ಥಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ನಗರದ ಮೂಲಸೌಕರ್ಯ ಸಮಸ್ಯೆಗಳತ್ತ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿರುವುದು, ರಂಗಿನಕಟ್ಟೆ ಹಾಗೂ ಇತರ ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆ ಇದ್ದು, ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದರು. ಅಲ್ಲದೆ, 110 ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ವಿಳಂಬ ಹಾಗೂ ಹಬ್ಬಗಳ ಸಂದರ್ಭಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಬಗ್ಗೆ ಹೆಸ್ಕಾಂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜಮ್‌ಪೀರ್ ಖಾದ್ರಿ ಮಾತನಾಡಿ, ಮುಸ್ಲಿಮರು ಧಾರ್ಮಿಕ ಶಿಸ್ತಿನೊಂದಿಗೆ ಆಧುನಿಕ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ದೇಶದ ಸಂವಿಧಾನದ ಮಾರ್ಗದರ್ಶನದಲ್ಲಿ ನಡೆಯುವುದು ಅಗತ್ಯ ಎಂದ ಅವರು, ಯುವಜನತೆ ತಮ್ಮ ಶಕ್ತಿಯನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಮಳೆಗಾಲಕ್ಕೂ ಮುನ್ನ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಿಸಿದ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿರುವ ದಡಾರ (ಮೀಸಲ್ಸ್) ರೋಗದ ಕುರಿತು ಕಳವಳ ವ್ಯಕ್ತಪಡಿಸಿ, ರೋಗ ತಡೆಗೆ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ರಸ್ತೆ ಅಪಘಾತ ತಡೆಯಲು ಹೆಲ್ಮೆಟ್ ಧರಿಸುವುದು ಕಡ್ಡಾಯ. ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಬಳಕೆಯನ್ನು ತಡೆಯಲು ಪೊಲೀಸ್ ಇಲಾಖೆಯ ಸನ್ಮಿತ್ರ ಕೌನ್ಸೆಲಿಂಗ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಸಾಸಿ ಮಾತನಾಡಿ, ಸರ್ಕಾರಿ ಯೋಜನೆಗಳು ಜನರಿಗೆ ತಲುಪಲು ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು. ಆರೋಗ್ಯ ಹಾಗೂ ಶಿಕ್ಷಣ ಸಂಬಂಧಿತ ಯೋಜನೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಂಘಟನೆಗಳು ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಉಪಸಂರಕ್ಷಣಾಧಿಕಾರಿ ಯೋಗೇಶ್, ಕಾಂಗ್ರೆಸ್ ಮುಖಂಡ ರಾಮಾ ಮೋಗೇರ, ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅಫ್ತಾಬ್ ಕೋಲಾ ಮಾತನಾಡಿದರು. ತಂಝೀಮ್ ಹಣಕಾಸು ಕಾರ್ಯದರ್ಶಿ ಮೌಲಾನ ಅಝೀಝುರ್‍ರಹ್ಮಾನ್ ನದ್ವಿ ಕುರಾನ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಎಂ.ಆರ್. ಮಾನ್ವಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸೈಯ್ಯದ್ ಇಮ್ರಾನ್ ಲಂಕಾ ವಂದಿಸಿದರು. ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ರವಿ ನಾಯ್ಕ, ನಗರಸಭೆ ಆಯುಕ್ತ ಬಾಬಾ ಸಾಹೇಬ್ ಮಾನೆ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.