ರೇರಾ ಕಾಯಿದೆ ಅನುಷ್ಠಾನದಿಂದ ಉಂಟಾಗಿರುವ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗುವುದು. ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಈ ಕಾಯಿದೆಯಿಂದ ಕೆಲವೊಂದು ತೊಡಕಾಗುತ್ತಿದ ಎಂಬುದು ಗೊತ್ತಾಗಿದೆ. ಅದನ್ನು ಪರಿಹರಿಸಲು ರೇರಾ ಕರ್ನಾಟಕ ಬದ್ಧವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರೇರಾ ಕಾಯಿದೆಯಿಂದ ಉಂಟಾಗುವ ಕೆಲವೊಂದು ತೊಡಕನ್ನು ತಿಳಿಸಿದರೆ ಒಂದೇ ದಿನದಲ್ಲಿ ಅದನ್ನು ಸರಿಪಡಿಸುತ್ತೇವೆ ಎಂದು ರೇರಾ ಕರ್ನಾಟಕದ ಅಧ್ಯಕ್ಷ ರಾಕೇಶ್‌ ಸಿಂಗ್‌ ಭರವಸೆ ನೀಡಿದರು.

ಕರ್ನಾಟಕ ರೇರಾ, ಕ್ರೆಡಾಯ್ ಮೈಸೂರು ಸಹಯೋಗದಲ್ಲಿ ಶನಿವಾರ ವಿದ್ಯಾರಣ್ಯಪುರಂನ ಎಂಬಿಸಿಟಿ ಹಾಲ್‌ ನಲ್ಲಿ ಆಯೋಜಿಸಿದ್ದ ರೇರಾ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರೇರಾ ಕಾಯಿದೆ ಅನುಷ್ಠಾನದಿಂದ ಉಂಟಾಗಿರುವ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗುವುದು. ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಈ ಕಾಯಿದೆಯಿಂದ ಕೆಲವೊಂದು ತೊಡಕಾಗುತ್ತಿದ ಎಂಬುದು ಗೊತ್ತಾಗಿದೆ. ಅದನ್ನು ಪರಿಹರಿಸಲು ರೇರಾ ಕರ್ನಾಟಕ ಬದ್ಧವಾಗಿದೆ ಎಂದರು.

ಕಳೆದ 50 ವರ್ಷಗಳಲ್ಲಿ ಸಮಾಜದಲ್ಲಿ ದುರಾಸೆಯಿಂದ ಹಲವು ಭ್ರಷ್ಟಾಚಾರ ಪ್ರಕರಣ ನಡೆದಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ದುಡಿಯುವವರು ಮುಂದಿನ ಪೀಳಿಗೆಗೆ ಉತ್ತಮ ಸಮಾಜ ಕಟ್ಟಬೇಕಿದೆ. ಅದಕ್ಕಾಗಿ ನಾವು ನಮ್ಮ ಕೆಲಸವನ್ನು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ದೇಶದ ಅಭಿವೃದ್ಧಿಗೆ ನಿರ್ಮಾಣ ಕ್ಷೇತ್ರವೇ ಆಧಾರ. ಅಂತೆಯೇ ಪ್ರತೀ ವರ್ಷ ದೇಶದ ಶೇ. 12- 13ರಷ್ಟು ಜಿಡಿಪಿ ವೃದ್ಧಿಯಾಗುವಲ್ಲಿ ಈ ಕ್ಷೇತ್ರದ ಕೊಡುಗೆ ಅಪಾರ. ಅಲ್ಲದೇ ಕೃಷಿ ಬಿಟ್ಟರೆ ನಿರ್ಮಾಣ ಕ್ಷೇತ್ರವೇ ದೇಶದಲ್ಲಿಯೇ ನೇರ ಹಾಗೂ ಪರೋಕ್ಷವಾಗಿ ಹೆಚ್ಚು ಉದ್ಯೋಗ ಸೃಷ್ಟಿಸುವ 2ನೇ ದೊಡ್ಡ ಕ್ಷೇತ್ರ. ಆ ಮೂಲಕ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಬಡಾವಣೆಗಳ ಹಸ್ತಾಂತರ, ಇ-ಖಾತೆ ಮಾಡಿಸುವುದು, ಮೈಸೂರು ನಗರ ಪಾಲಿಕೆಯನ್ನು ಗ್ರೇಡ್-1 ಪಾಲಿಕೆಯಾಗಿ ಪರಿವರ್ತಿಸುವುದು ಸರ್ಕಾರದಿಂದ ಕೈಗೊಳ್ಳಲಾದ ಮೂರು ಪ್ರಮುಖ ನಿರ್ಧಾರ. ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್ ಉದ್ಯಮಕ್ಕೆ ಹಿನ್ನಡೆಯಾಗಿದೆ. ಇಷ್ಟು ಹಿನ್ನಡೆಯ ನಡುವೆಯೂ ಪ್ರತೀ ವರ್ಷ 10 ರಿಂದ 15 ಸಾವಿರ ನಿವೇಶನವನ್ನು ಅಭಿವೃದ್ಧಿಪಡಿಸುತ್ತಿರುವುದು ಅಚ್ಚರಿಯ ಸಂಗತಿ ಎಂದರು.

25 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ ಬಡಾವಣೆಗಳು ಹಸ್ತಾಂತರಗೊಳ್ಳದ ಕಾರಣಕ್ಕೆ ನಾಗರಿಕರಿಗೆ ಮೂಲ ಸೌಲಭ್ಯ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವರ್ಗಾವಣೆಯಾಗದೇ ಮುಡಾ ಸುಪರ್ದಿನಲ್ಲಿದ್ದ 1 ಸಾವಿರಕ್ಕೂ ಹೆಚ್ಚು ಬಡಾವಣೆ ಹಾಗೂ 1 ಲಕ್ಷ ಖಾತೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು ಎಂದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ರೇರಾ ಕರ್ನಾಟಕ ಕಾರ್ಯದರ್ಶಿ ಎಚ್.ಆರ್. ಶಿವಕುಮಾರ್, ಕ್ರೆಡಾಯ್ ಮೈಸೂರು ಅಧ್ಯಕ್ಷ ಶೆಣೈ, ಕಾರ್ಯದರ್ಶಿ ನಾಗರಾಜ್ ವಿ. ಬೈರಿ ಮೊದಲಾದವರು ಇದ್ದರು.