ಸಾರಾಂಶ
ವಿದ್ಯುತ್ ಕಂಬದ ತಂತಿಗೆ ಸಿಲುಕಿ ನೇತಾಡುತ್ತಿದ್ದ ಪಾರಿವಾಳವನ್ನು ಪವರ್‌ಮ್ಯಾನ್‌ವೊಬ್ಬರು ರಕ್ಷಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಇಲ್ಲಿನ ಎಪಿಸಿಎಂಎಸ್ ಮುಂಭಾಗವಿರುವ ವಿದ್ಯುತ್ ಕಂಬದ ತಂತಿಗೆ ಸಿಲುಕಿ ನೇತಾಡುತ್ತಿದ್ದ ಪಾರಿವಾಳವನ್ನು ಪವರ್ ಮ್ಯಾನ್ ವೊಬ್ಬರು ರಕ್ಷಿಸಿದ್ದಾರೆ.ಸೋಮವಾರ ಬೆಳಗ್ಗೆ ಪಾರಿವಾಳದ ಗುಂಪೊಂದು ಹಾರಿಕೊಂಡು ಬರುತ್ತಿದ್ದಾಗ ಅವುಗಳ ಪೈಕಿ ಒಂದು ಪಾರಿವಾಳ ಗೋಣಿಕೊಪ್ಪಲು ಎಪಿಸಿಎಂಎಸ್ ಮುಂಭಾಗವಿರುವ ವಿದ್ಯುತ್ ಕಂಬದ ತಂತಿಗೆ ಹಗ್ಗದೊಂದಿಗೆ ಸಿಕ್ಕಿಕೊಂಡು ನೇತಾಡತೊಡಗಿದೆ. ಇದನ್ನು ಗಮನಿಸಿದ ಎಪಿಸಿಎಂಎಸ್ ಸಿಬ್ಬಂದಿ ಪ್ರವೀಣ್ ಅವರು ಸೆಸ್ಕ್ ಕಚೇರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣ ವಿದ್ಯುತ್ ಕಡಿತಗೊಳಿಸಿ ಪವರ್ ಮ್ಯಾನ್ ಗಳಾದ ರಾಘವೇಂದ್ರ, ಸಿರಾಜ್ ಮತ್ತು ಸಿದ್ದರಾಜ್ ಅವರು ಧಾವಿಸಿ ಬಂದಿದ್ದಾರೆ. ಇವರ ಪೈಕಿ ರಾಘವೇಂದ್ರ ಅವರು ವಿದ್ಯುತ್ ಕಂಬವನ್ನೇರಿ ಬಹುಪ್ರಯಾಸದಿಂದ ತಂತಿಯಿಂದ ಪಾರಿವಾಳವನ್ನು ಬೇರ್ಪಡಿಸಿ ಅದರ ಜೀವ ಉಳಿಸುವ ಮೂಲಕ ಮಾನವೀಯತೆಯನ್ನು ಸಾಕ್ಷೀಕರಿಸಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.