ವಾಹನ ಡಿಕ್ಕಿಯಾಗಿ ಗಾಯಗೊಂಡು ಕೆರೆಯಲ್ಲಿ ಬಿದ್ದ ಕಡವೆ ರಕ್ಷಣೆ

| Published : Oct 20 2024, 01:50 AM IST

ಸಾರಾಂಶ

ಧನ್ವಂತರಿ ಸಮೀಪ ವಾಹನ ಚಾಲಕ ಅಜಾಗರೂಕತೆಯಿಂದ ಕಡವೆಗೆ ವಾಹನ ಡಿಕ್ಕಿಯಾಗಿದೆ. ಪರಿಣಾಮ ಕಡವೆ ಹಿಂಬದಿ ಕಾಲಿಗೆ ಗಂಭೀರ ಪೆಟ್ಟಾಗಿದೆ.

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗುಪ್ಪಾ ಸಮೀಪ ಮಾರುತಿ ಇಕೋ ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಕಡವೆಯೊಂದು ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಧನ್ವಂತರಿ ಸಮೀಪ ವಾಹನ ಚಾಲಕ ಅಜಾಗರೂಕತೆಯಿಂದ ಕಡವೆಗೆ ವಾಹನ ಡಿಕ್ಕಿಯಾಗಿದೆ. ಪರಿಣಾಮ ಕಡವೆ ಹಿಂಬದಿ ಕಾಲಿಗೆ ಗಂಭೀರ ಪೆಟ್ಟಾಗಿದೆ. ನಂತರ ಅಲ್ಲಿಂದ ನೋವಿನಲ್ಲೆ ನರಳುತ್ತ ತೆರಳಿದ ಕಡವೆ ಧನ್ವಂತರಿ ದೇವಸ್ಥಾನ ಸಮೀಪದ ಕೆರೆಯಲ್ಲಿ ಬಿದ್ದಿದೆ. ವಿಷಯ ತಿಳಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೆರೆಯ ಮಣ್ಣನ್ನು ತೆರವು ಮಾಡಿ ಅಪಘಾತಕ್ಕೊಳಗಾದ ಕಡವೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಕಡವೆ ಕೆರೆಯಿಂದ ಅಡವಿಗೆ ಹೋಗಿದೆ. ಕಡವೆಯ ಕಾಲಿಗೆ ಪೆಟ್ಟಾಗಿರುವುದರಿಂದ ಓಡಲು ಕಷ್ಟಕರವಾಗಿದೆ. ಯಾರೂ ಅದನ್ನು ಬೇಟೆಯಾಡದಂತೆ ನೋಡಿಕೊಳ್ಳಲು ಅರಣ್ಯ ಇಲಾಖಾಧಿಕಾರಿಗಳು ಹಗಲು- ರಾತ್ರಿ ಕಾವಲು ಹಾಕಿದ್ದಾರೆ. ಘಟನೆ ಕುರಿತಂತೆ ವಾಹನ ಚಾಲಕ ಜಲವಳ್ಳಿಯ ರೋಹಿದಾಸ ಶಿವಕುಮಾರ್ ನಾಯ್ಕ ವಿರುದ್ಧ ಅರಣ್ಯ ಇಲಾಖಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ‌.

ಕಾರ್ಯಾಚರಣೆಯಲ್ಲಿ ಡಿಎಫ್ಒ ಯೋಗೇಶ, ಆರ್‌ಎಫ್‌ಒ ಸವಿತಾ ದೇವಾಡಿಗ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಇತ್ತಿಚಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದ ವಾಹನ ಚಾಲನೆಯಿಂದ ಜಾನುವಾರುಗಳು, ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಮೂಕ ಜೀವಿಗಳ ಸಾವು-ನೋವಿಗೆ ಕಾರಣರಾಗುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.ಕಾಡು ಪ್ರಾಣಿ ಮಾಂಸ ಸಂಗ್ರಹ: ಅಧಿಕಾರಿಗಳ ದಾಳಿ

ಮುಂಡಗೋಡ:

ಪಟ್ಟಣದ ಅಂಬೇಡ್ಕರ್ ಓಣಿಯ ರಾಜು ಲಕ್ಷ್ಮಣ ಹರಿಜನ ಅವರ ಮನೆಯಲ್ಲಿ ಶೇಖರಿಸಿಟ್ಟಿದ್ದ ಕಾಡು ಪ್ರಾಣಿಯ ಮಾಂಸ ಹಾಗೂ ಕೃತ್ಯಕ್ಕೆ ಬಳಸಲಾದ ಒಂದು ಬೈಕ್ ಸಮೇತ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಒಂದು ತಕ್ಕಡಿ, ೧ ತೂಕದ ಕಲ್ಲು ಕುಡುಗೋಲು, ಚಾಕು, ಹೆಡ್ ಟಾರ್ಚ್‌ಗಳನ್ನು ಹಾಗೂ ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಆರೋಪಿತರಾದ ಅಂಬೇಡ್ಕರ್ ಓಣಿಯ ರಾಜು ಹರಿಜನ ಮತ್ತು ಸುಭಾಸ ನಗರದ ಕುಮಾರ ಕೊರವರ ಪರಾರಿಯಾಗಿದ್ದು, ಅರಣ್ಯ ಇಲಾಖೆಯವರು ಅವರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು, ಮುಂಡಗೋಡ ಎ.ಸಿ.ಎಫ್. ರವಿ ಹುಲಕೋಟಿ, ಮುಂಡಗೋಡ ಆರ್.ಎಫ್.ಒ. ವಾಗೀಶ ಬಾಚಿನಕೊಪ್ಪ, ಅವರ ಮಾರ್ಗದರ್ಶನಲ್ಲಿ ಉಪ ವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ, ಗಿರೀಶ ಕೋಳೇಕರ ಹಾಗೂ ಗಸ್ತು ಅರಣ್ಯ ಪಾಲಕರಾದ ದೇವರಾಜ ಆಡಿನ್ ಮತ್ತು ಶಿವಪ್ಪ ಬಿ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.