ಸಾರಾಂಶ
ಲೇಖಕ, ವಿಶೇಷವಾಗಿ ಚಾರಿತ್ರಿಕ ಕಾದಂಬರಿಕಾರ ತಾನು ಕಂಡುಕೊಂಡ, ಸಂಶೋಧಿಸಿದ ಸಂಗತಿಗಳನ್ನಾಧರಿಸಿ ಕೃತಿ ರಚಿಸುತ್ತಾನೆ. ಇಂಥ ಅಧ್ಯಯನದಿಂದ ಸತ್ಯಗಳು ಹೊರಬಂದಾಗ ‘ಮಾಗಧ’ದಂತಹ ಕಾದಂಬರಿ ನಿರ್ಮಾಣವಾಗುತ್ತದೆ.
ಧಾರವಾಡ:
ಸಂಶೋಧನೆ ಎಂಬುದು ಅಲ್ಪವಿರಾಮ, ಅದು ನಿರಂತರವಾಗಿ ನಡೆಯುವಂಥದ್ದು. ಲೇಖಕ, ವಿಶೇಷವಾಗಿ ಚಾರಿತ್ರಿಕ ಕಾದಂಬರಿಕಾರ ತಾನು ಕಂಡುಕೊಂಡ, ಸಂಶೋಧಿಸಿದ ಸಂಗತಿಗಳನ್ನಾಧರಿಸಿ ಕೃತಿ ರಚಿಸುತ್ತಾನೆ. ಇಂಥ ಅಧ್ಯಯನದಿಂದ ಸತ್ಯಗಳು ಹೊರಬಂದಾಗ ‘ಮಾಗಧ’ದಂತಹ ಕಾದಂಬರಿ ನಿರ್ಮಾಣವಾಗುತ್ತದೆಂದು ಕಾದಂಬರಿಕಾರ ಯ.ರು. ಪಾಟೀಲ ಹೇಳಿದರು.ಉತ್ತರ ಕರ್ನಾಟಕ ಲೇಖಕಿಯರ ಸಂಘದಲ್ಲಿ ಪ್ರೊ. ಲಲಿತಾಂಬ ವೃಷಭೇಂದ್ರಸ್ವಾಮಿ ದತ್ತಿಯಲ್ಲಿ ಉಪನ್ಯಾಸ ನೀಡಿದ ಅವರು, ಮಾಗಧ ಕಾದಂಬರಿ ಕುರಿತು ಮಾತನಾಡಿದರು. ಈ ಕಾದಂಬರಿಯ ಕ್ಷೇತ್ರಕಾರ್ಯ, ವಿಷಯ ಸಂಗ್ರಹಣೆ, ವಿಶ್ಲೇಷಣೆಗಳ ನಂತರ ಆ ಕೃತಿ ಗಟ್ಟಿ ಕೃತಿಯಾಗಿರುತ್ತದೆ. ಇಂಥವು ಮಾತ್ರ ಕಾಲದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುತ್ತವೆ ಎಂದರು.
ಇದಕ್ಕೂ ಮೊದಲು ಮಾಗಧ ಕೃತಿಯ ವಿನ್ಯಾಸ ಮತ್ತು ಶೈಲಿಯ ಬಗ್ಗೆ ಮಾತನಾಡಿದ ಲೇಖಕಿ ರೂಪಾ ಜೋಷಿ, ಕಾದಂಬರಿಕಾರ್ತಿ ಸಹನಾ ಅವರು 800 ಪುಟಗಳ ಮಾಗಧ ಕೃತಿಗೆ ಪ್ರೇರಣೆ ನೀಡಿದ ವಿಷಯಗಳನ್ನು ಪ್ರಸ್ತಾಪಿಸಿದರು. ಮನೆಯ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಪರಿಸರದ ಜತೆಗೆ ಹಿಮಾಚಲ ಹರಡಿಕೊಂಡಿರುವ ಭಾರತೀಯ ಸಂಸ್ಕೃತಿಯ ಪ್ರಭೆ, ಅದನ್ನು ಬೆಳಗಿದ ಮಹನೀಯರ ಹಾಗೂ ಈ ನೆಲದ ಕುರಿತಾದ ಆಸಕ್ತಿ ಈ ಅಧ್ಯಯನಕ್ಕೆ, ಈ ಕೃತಿಗೆ ಕಾರಣವಾಯಿತೆಂದು ತಿಳಿಸಿದರು.ಕಾದಂಬರಿಯಲ್ಲಿ ಎಲ್ಲಿಯೂ ವಿವರಣೆಗಳೇ ಇಲ್ಲ. ಸಂಭಾಷಣೆಗಳೇ ಎಲ್ಲ ವಿಷಯಗಳನ್ನು ಬಿತ್ತರಿಸುತ್ತಾ ಪಾತ್ರಗಳನ್ನು ಕಟ್ಟಿಕೊಡುವ ಸಹನಾ ಬರವಣಿಗೆಯ ರೀತಿ ಅನನ್ಯ. ಮಾಗಧ ಸುಲಭವಾಗಿ ಓದಿಸಿಕೊಂಡು ಹೋಗುವ ಲಾಲಿತ್ಯದ ಶೈಲಿ ಇಲ್ಲಿಲ್ಲ. ಧ್ಯಾನಸ್ಥ ಸ್ಥಿತಿಯಲ್ಲಿ ಓದುವ ಓದುಗನಿಗೆ ಮಾತ್ರ ಇದು ನಿಲುಕುವಂಥದ್ದೆಂಬ ಮಾತನ್ನು ಅವರು ಹೇಳಿದರು.
ನಂತರದಲ್ಲಿ ಕಾದಂಬರಿಯ ಭಾಷೆ ಹಾಗೂ 200ಕ್ಕೂ ಮಿಕ್ಕಿರುವ ಪಾತ್ರಗಳ ಕುರಿತಾಗಿ ಸರಸ್ವತಿ ಭೋಸ್ಲೆ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ, ‘ಲೇಖಕಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಹೋಗಿ ನಡೆಸಿದ ಸಂಶೋಧನೆ ಹಾಗೂ ಸತತ ನಾಲ್ಕು ವರ್ಷಗಳ ಅಧ್ಯಯನದ ಫಲವಾಗಿ ಮೂಡಿಬಂದ ಈ ಕೃತಿ ನಿಶ್ಚಿತವಾಗಿ ಸಾಹಿತ್ಯ ಇತಿಹಾಸದಲ್ಲಿ ಸ್ಥಾನ ಪಡೆಯುತ್ತದೆಂದು ಹೇಳಿದರು.ದತ್ತಿದಾನಿಗಳಾದ ಡಾ. ಎಸ್.ಎಂ. ಶಿವಪ್ರಸಾದ ಇದ್ದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಡಾ. ಉಷಾ ಗದ್ದಗಿಮಠ ಸ್ವಾಗತಿಸಿದರು. ಡಾ. ವಿ. ಶಾರದಾ ವಂದಿಸಿದರು.