ಸಂಶೋಧನೆಗೆ ನ್ಯಾಯ ನೀಡುವ ನೈತಿಕತೆ ಅಗತ್ಯ

| Published : Jul 07 2024, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಂಶೋಧಕರು ಪ್ರತಿಯೊಂದನ್ನು ಬಿಡಿಸಿ ನೋಡುವ, ಎಲ್ಲ ಆಯಾಮಗಳಿಂದ ಆಲೋಚಿಸುವ ಹಾಗೂ ಚಿಂತಿಸುವ ಸಂಶೋಧನೆಗೆ ನ್ಯಾಯ ಒದಗಿಸುವ ನೈತಿಕತೆ ಇರಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಹಮತ ತರಿಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಶೋಧಕರು ಪ್ರತಿಯೊಂದನ್ನು ಬಿಡಿಸಿ ನೋಡುವ, ಎಲ್ಲ ಆಯಾಮಗಳಿಂದ ಆಲೋಚಿಸುವ ಹಾಗೂ ಚಿಂತಿಸುವ ಸಂಶೋಧನೆಗೆ ನ್ಯಾಯ ಒದಗಿಸುವ ನೈತಿಕತೆ ಇರಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಹಮತ ತರಿಕೇರಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಪ.ಜಾ, ಪ.ಪಂ ನಿರ್ದೇಶನಾಲಯದ ವತಿಯಿಂದ ನಡೆದ ಸಂಶೋಧನಾ ವೈಧಾನಿಕತೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂಶೋಧನೆಯ ರಚನೆಯಲ್ಲಿ ಪ್ರಸಿದ್ಧ ಸಂಶೋಧಕರ ಸಂಶೋಧನಾ ವೈಧಾನಿಕತೆಯನ್ನು ಅನ್ವಯಿಸಿಕೊಂಡರೆ ಸಂಶೋಧನೆಗೆ, ಸಮಾಜಕ್ಕೆ ನ್ಯಾಯ ಒದಗಿಸಲಾರದು. ಪ್ರತಿ ಸಂಶೋಧನಾ ವಿಷಯದ ವೈಧಾನಿಕತೆಯೇ ಭಿನ್ನವಾಗಿರುತ್ತದೆ. ಮಾಹಿತಿಯನ್ನು ಒದಗಿಸುವುದು, ಅಚ್ಚುಕಟ್ಟಾಗಿ ಹೊಂದಿಸುವುದು ಸಂಶೋಧನೆಯಾಗಲಾರದು. ವಿಶ್ಲೇಷಣೆ, ಸೈದ್ಧಾಂತಿಕರಣವನ್ನು ಸಂಶೋಧನೆ ಒಳಗೊಂಡಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಸಂಶೋಧನಾ ಅಧ್ಯಯನ ಚಿಕ್ಕದಾದಷ್ಟು ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಸಂಶೋಧಕರು ಪತ್ತೆದಾರಿಗಳಂತೆ ಹಗಲಿರುಳು ಬೌದ್ಧಿಕವಾಗಿ, ಭೌತಿಕವಾಗಿಯೂ ಕಾರ್ಯನಿರ್ವಹಿಸಬೇಕು. ಪ್ರಭುತ್ವಕ್ಕೆ ಪೂರಕವಾಗಿ, ಮೆಚ್ಚುಗೆಯಾಗುವಂತೆ ಇದ್ದರೆ ಪ್ರಭುತ್ವ ಜನರ ಮೇಲೆ ಕುಣಿಯುತ್ತದೆ. ಆದ್ದರಿಂದಾಗಿ ಸಂಶೋಧಕರು ಹಿಂದಣ ಹೆಜ್ಜೆ ಜೊತೆಗೆ ಮುಂದಣ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ಪ್ರತಿಯೊಂದು ಚಿಂತನೆ, ಸಿದ್ಧಾಂತ, ದೃಷ್ಟಿಕೋನದ ಸಮ್ಮತಿ- ಅಸಮ್ಮತಿಯ ಜೊತೆಗೆ ಸಂಶೋಧಕರು ತಮ್ಮ ಚಿಂತನೆಯನ್ನು ಮಂಡಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಡಾ.ಭಾರತಿ ಗಾಣೀಗೇರ ಮಾತನಾಡಿ, ಸಮಾಜ ವಿಜ್ಞಾನ ಸಂಶೋಧನೆಗಳು ಸಮಾಜದ ಅವಿಭಾಜ್ಯ ಅಂಗ. ಸಂಶೋಧಕರಿಗೆ ಸಂಶೋಧನೆಯ ಕುರಿತು ಆಸಕ್ತಿ ಮತ್ತು ಕುತೂಹಲ ಮತ್ತು ಸಮುದಾಯಕ್ಕೆ ಕೊಡುಗೆ ನೀಡುವ ಗುಣವನ್ನು ಬೆಳೆಸಿಕೊಂಡಿರಬೇಕು ಎಂದು ಹೇಳಿದರು.ಮಹಿಳಾ ಅಧ್ಯಯನ ಕೇಂದ್ರ ಮತ್ತು ಪ.ಜಾ, ಪ.ಪಂಗಡದ ನಿರ್ದೇಶಕಿ ಪ್ರೊ.ಲಕ್ಷ್ಮೀದೇವಿ ವೈ, ಪ್ರೊ.ವಿಷ್ಣು ಸಿಂಧೆ, ಡಾ.ಭಾಗ್ಯಶ್ರೀ ದೊಡಮನಿ, ಡಾ.ಸರೋಜಾ ಸಂತಿ, ಡಾ.ಶಶಿಕಲಾ ರಾಠೋಡ, ಡಾ.ರಜಿಯಾ ನದಾಫ ಮುಂತಾದವರು ಹಾಜರಿದ್ದರು.