ಮೀಸಲಾತಿ ವಿಳಂಬ; ನಗರಸಭೆ ಸದಸ್ಯರ ರೋದನ

| Published : Jun 19 2024, 01:02 AM IST

ಸಾರಾಂಶ

ನಗರಸಭೆ ಚುನಾವಣೆ ನಡೆದಿದ್ದು ಆಯ್ತು, ಅಭ್ಯರ್ಥಿಗಳು ಗೆದ್ದಿದ್ದು ಆಯ್ತು. ಆದರೆ, ಯಾವುದೇ ಅಧಿಕಾರ ಸಿಗದೇ ನಗರಸಭೆಯಲ್ಲಿ ಕೇವಲ ನಾಮಕಾವಾಸ್ತೇ ಕೆಲಸ ಮಾಡುವಂತಾಗಿದೆ ಗೆದ್ದವರ ಪರಿಸ್ಥಿತಿ. ಕಾರಣ, ಮೊದಲ ಬಾರಿಗೆ ಜನಪ್ರತಿನಿಧಿಗಳಾಗಿ ವರ್ಷ ಕಳೆದರೂ ಹುದ್ದೆ ಅಲಂಕರಿಸಲಾಗುತ್ತಿಲ್ಲ. ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವುದು ರಬಕವಿ-ಬನಹಟ್ಟಿ ನಗರಸಭೆ ಸದಸ್ಯರರು. ಗೆದ್ದರೂ ಅಧಿಕಾರ ಇಲ್ಲದೆ ಹಲ್ಲು ಕಿತ್ತ ಹಾವಿನಂತಾಗಿದೆ ಇವರ ಪರಿಸ್ಥಿತಿ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಗರಸಭೆ ಚುನಾವಣೆ ನಡೆದಿದ್ದು ಆಯ್ತು, ಅಭ್ಯರ್ಥಿಗಳು ಗೆದ್ದಿದ್ದು ಆಯ್ತು. ಆದರೆ, ಯಾವುದೇ ಅಧಿಕಾರ ಸಿಗದೇ ನಗರಸಭೆಯಲ್ಲಿ ಕೇವಲ ನಾಮಕಾವಾಸ್ತೇ ಕೆಲಸ ಮಾಡುವಂತಾಗಿದೆ ಗೆದ್ದವರ ಪರಿಸ್ಥಿತಿ. ಕಾರಣ, ಮೊದಲ ಬಾರಿಗೆ ಜನಪ್ರತಿನಿಧಿಗಳಾಗಿ ವರ್ಷ ಕಳೆದರೂ ಹುದ್ದೆ ಅಲಂಕರಿಸಲಾಗುತ್ತಿಲ್ಲ. ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವುದು ರಬಕವಿ-ಬನಹಟ್ಟಿ ನಗರಸಭೆ ಸದಸ್ಯರರು. ಗೆದ್ದರೂ ಅಧಿಕಾರ ಇಲ್ಲದೆ ಹಲ್ಲು ಕಿತ್ತ ಹಾವಿನಂತಾಗಿದೆ ಇವರ ಪರಿಸ್ಥಿತಿ.ರಬಕವಿ-ಬನಹಟ್ಟಿ ನಗರಸಭೆಯ ಮೊದಲ ಅವಧಿಯ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ಪ್ರಕಟಗೊಂಡು ಕಾರ್ಯನಿರ್ವಹಿಸಿದ್ದಾಗಿದೆ. ಮುಂದಿನ ಎರಡೂವರೆ ವರ್ಷಗಳ ಪೈಕಿ ಅಂದರೆ ೩೦ ತಿಂಗಳಲ್ಲಿನ ೧೩ ತಿಂಗಳು ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ ಪ್ರಕಟಗೊಳ್ಳದ ಕಾರಣ ಆಡಳಿತಾಧಿಕಾರಿ ಅಧೀನದಲ್ಲಿ ನಗರಸಭೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸದಸ್ಯರಾದರೂ ಕಾರ್ಯಭಾರ ಮಾಡಲು ಸದಸ್ಯರು ಇದ್ದೂ ಇಲ್ಲದಂತಹ ಸ್ಥಿತಿ ನಗರ ಸೇವಕರದ್ದಾಗಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ನಂತರ ಮೀಸಲಾತಿ ಪ್ರಕಟಗೊಳ್ಳಬಹುದೆಂಬ ಲೆಕ್ಕಾಚಾರ ಇತ್ತು. ಆದರೆ, ವಿಧಾನಸಭೆ ಚುನಾಚಣೆ ಮುಗಿದು ಒಂದು ವರ್ಷದ ಕಳೆದು ಮತ್ತೆ ಲೋಕಸಭೆಯ ಚುನಾವಣೆ ಕೂಡ ಮುಕ್ತಾಯಗೊಂಡರೂ ಇಲ್ಲಿವರೆಗೆ ಮೀಸಲಾತಿ ಪಟ್ಟಿ ಮಾತ್ರ ಪ್ರಕಟಗೊಂಡಿಲ್ಲ. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಮಾತ್ರವಲ್ಲ, ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ ನಾವು ಏನು ಉತ್ತರ ಹೇಳಬೇಕು, ವಾರ್ಡ್‌ಗಳಲ್ಲಿ ಏನು ಕೆಲಸ ಮಾಡಬೇಕು ಎಂದು ಯೋಚನೆಯಲ್ಲಿದ್ದಾರೆ ಸದಸ್ಯರು.ಇದ್ದೂ ಇಲ್ಲದಂತಾದ ಅಧಿಕಾರ:

ನಗರಸಭೆಯಲ್ಲಿ ೩೧ ವಾರ್ಡ್‌ಗಳಿದ್ದು, ಇವುಗಳ ಸದಸ್ಯರು ನಗರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದೇ ಅಧಿಕಾರ ಇದ್ದೂ ಇಲ್ಲದಂತಹ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಹಾಗೂ ವಾರ್ಡ್‌ ಸದಸ್ಯರ ಸಮಸ್ಯೆಗಳಿಗೆ ಕೆಲಸ ಕಾರ್ಯಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾದರೂ ವಿಳಂಬ ಧೋರಣೆಯಿಂದ ವಿರೋಧ ಪಕ್ಷದ ಸದಸ್ಯರು ಮಾತ್ರವಲ್ಲ ಆಡಳಿತ ಪಕ್ಷದ ಸದಸ್ಯರೂ ಮುಜುಗರಕ್ಕೆ ಒಳಗಾಗುವಂತಾಗಿರುವುದು ಮಾತ್ರ ಕಹಿ ಸತ್ಯ.ಕಾಮಗಾರಿ ನನೆಗುದಿಗೆ:

ಸಾಮಾನ್ಯ ಸಭೆಗಳು ನಡೆಯದೆ ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಇದೀಗ ನನೆಗುದಿಗೆ ಬಿದ್ದಿವೆ. ನಗರ ಅಭಿವೃದ್ಧಿ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ಮಹತ್ವದ ನಿರ್ಣಯ ಕೈಗೊಳ್ಳುವುದಕ್ಕಾಗಲಿ, ಹಣಕಾಸಿನ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದ ನಗರದ ಅಭಿವೃದ್ಧಿಯೇ ಮರೀಚಿಚಿಕೆಯಾಗಿದೆ.

ನಗರಸಭೆಯಲ್ಲಿ ಅಧಿಕಾರವಿಲ್ಲದ ಕಾರಣ ನಗರದ ಅಭಿವೃದ್ಧಿ ಸಲುವಾಗಿ ಮಹತ್ವದ ನಿರ್ಣಯಗಳ ಕೈಗೊಳ್ಳುವುದು ಹಾಗೂ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸಲಾಗದಿರುವುದು ತುಂಬ ಮುಜುಗರವಾಗುತ್ತಿದೆ.

-ಸಂಜಯ ತೆಗ್ಗಿ,

ಮಾಜಿ ನಗರಾಧ್ಯಕ್ಷ, ರಬಕವಿ-ಬನಹಟ್ಟಿ.

----

ನಗರಸಭೆಗೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಸರ್ಕಾರದ ಎಲ್ಲ ಅನುದಾನಗಳನ್ನು ಸದಸ್ಯರ ಗಮನಕ್ಕೆ ತಂದು ಯೋಜನೆಗಳನ್ನು ರೂಪಿಸಲಾಗುತ್ತಿದೆ.

-ಜಗದೀಶ ಈಟಿ, ನಗರಸಭೆ ಪೌರಾಯುಕ್ತ