ಖಾಸಗಿ ಶಾಲೆಗಳಲ್ಲಿ ಕೇವಲ ಎಸಿ, ಸುಂದರ ಕೊಠಡಿಗಳಿರಬಹುದು. ಆದರೆ ಸರ್ಕಾರಿ ಶಾಲೆಯಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಸಿಗಲಿದೆ.
ನರಸಾಪುರ ಕೆಪಿಎಸ್ ಶಾಲಾ ಪ್ರಾರಂಭೋತ್ಸವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ
ಕನ್ನಡಪ್ರಭ ವಾರ್ತೆ ಕೋಲಾರಪೋಷಕರು ತಮ್ಮ ಮಕ್ಕಳಿಗೆ ಧರ್ಮಸ್ಥಳ, ತಿರುಪತಿ, ದರ್ಗಾ ಅಥವಾ ಚರ್ಚ್‌ಗಳಿಗಿಂತಲೂ ತಾವು ಓದುವ ಶಾಲೆಯೇ ನಿಜವಾದ ದೇವಸ್ಥಾನ, ಪುಸ್ತಕವೇ ತಾಯಿ ಮತ್ತು ಪೆನ್ನೇ ತಂದೆ ಎಂಬುದನ್ನು ಮೊದಲು ಕಲಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಉದ್ಯೋಗದಲ್ಲಿ ವಿಶೇಷ ಮೀಸಲಾತಿಯು ಇರಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಪೋಷಕರಿಗೆ ತಿಳಿಸಿದರು.ತಾಲೂಕಿನ ನರಸಾಪುರದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಯ (ಕೆಪಿಎಸ್) ೨೦೨೬-೨೭ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಕೇವಲ ಎಸಿ, ಸುಂದರ ಕೊಠಡಿಗಳಿರಬಹುದು. ಆದರೆ ಸರ್ಕಾರಿ ಶಾಲೆಯಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಸಿಗಲಿದೆ. ಈ ಸೌಲಭ್ಯ ಖಾಸಗಿ ಶಾಲೆಯ ಮಕ್ಕಳಿಗೆ ಸಿಗುವುದಿಲ್ಲ.ಪ್ರತಿದಿನ ನನ್ನ ಕಚೇರಿಗೆ ನೂರಾರು ಪೋಷಕರು ಖಾಸಗಿ ಶಾಲೆಯ ಫೀಸ್ ಕಟ್ಟಲಾಗದೆ ನೆರವಿಗಾಗಿ ಬರುತ್ತಾರೆ. ಸರ್ಕಾರದಿಂದ ಬರುವ ನನ್ನ ಸಂಬಳ ಹಾಗೂ ಗೌರವಧನದ ಒಂದು ರುಪಾಯಿಯನ್ನೂ ನಾನು ಮನೆಗೆ ತೆಗೆದುಕೊಂಡು ಹೋಗದೆ, ಇಂತಹ ಬಡ ಮಕ್ಕಳ ಫೀಸ್ ಹಾಗೂ ಆಸ್ಪತ್ರೆ ಖರ್ಚಿಗಾಗಿಯೇ ಚೆಕ್ ಮೂಲಕ ವಿತರಿಸಿ ಬಿಡುತ್ತೇನೆ. ಪೋಷಕರು ಖಾಸಗಿ ಶಾಲೆಯ ಭಾರ ಹೊರುವ ಬದಲು ಸರ್ಕಾರಿ ಶಾಲೆಗಳ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯಾಭ್ಯಾಸ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ದಾನಿಗಳು ಸದಾ ಹಗಲಿರಳು ಶ್ರಮಿಸುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ತಾವೇನೂ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ ಎನ್ನುವ ಆತ್ಮವಿಶ್ವಾಸದಿಂದ ಓದಬೇಕು ಎಂಬ ಒಂದೇ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಇಡೀ ಶಾಲೆಗೆ ಸತ್ಯನಾರಾಯಣ ಜ್ಯೂವೆಲರ್ಸ್ ಮಾಲೀಕ ವೆಂಕಟೇಶ್ ಸುಂದರವಾದ ಬಣ್ಣ ಬಳಿಸಿಕೊಟ್ಟಿದ್ದಾರೆ. ಅವರ ಈ ಜನಪರ ಸೇವೆಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೋಲಾರದ ಶಾಸಕರು ಇವತ್ತಿನ ರಾಜಕೀಯದ ಸಂದರ್ಭದಲ್ಲಿ ಬೇರೆ ಶಾಸಕರಂತೆ ದೆಹಲಿಗೆ ಹೋಗಿ ಮಂತ್ರಿಗೆ ಲಾಬಿ ಮಾಡಲಿಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಇರುವ ಕಾಳಜಿಗೆ ಬಂದಿದ್ದಾರೆ. ಶಿಕ್ಷಣದ ಗುಣಮಟ್ಟ ಸುಧಾರಿಸಲು ಕೆಪಿಎಸ್ ಶಾಲೆಗಳು ಸಹಕಾರಿಯಾಗಲಿವೆ, ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಐದು ಶಾಲೆ ಮಾತ್ರ ಇದ್ದು ಮುಂದೆ ಇನ್ನೂ ಅವಶ್ಯಕತೆ ಇರುವ ಕಡೆ ಶಾಲೆ ಮಂಜೂರು ಮಾಡಲಾಗುತ್ತದೆ, ಪೋಷಕರು ಖಾಸಗಿ ಶಾಲೆಗಳ ಇಂಗ್ಲಿಷ್ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ಶೃಂಗೇರಿ ಮಾದರಿಯಲ್ಲಿ ಮಕ್ಕಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಬ್ಯಾಗ್‌ಗಳನ್ನು ದಾನಿಗಳಿಂದ ಮೂಲಕ ವಿತರಿಸಲಾಯಿತು. ಬಿಇಒ ಕೆ.ಶೋಭಾ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಕೆಪಿಎಸ್ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ್, ಸತ್ಯನಾರಾಯಣ ಜ್ಯೂವೆಲರ್ಸ್ ಮಾಲೀಕ ಬಿ.ಎಸ್ ವೆಂಕಟೇಶ್, ಮುಖ್ಯೋಪಾಧ್ಯಾಯರಾದ ಗೋಪಿನಾಥ್, ಕೆ.ಎಸ್.ಜಗನ್ನಾಥ್ ಇದ್ದರು.