ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗವೀಮಠದ ಮೊರಾರ್ಜಿ ವಸತಿ ಶಾಲೆ ಅಕ್ಕಿ ಹಗರಣ, ಶೀಳನೆರೆ ಹೋಬಳಿಯಲ್ಲಿ ಅಕ್ರಮವಾಗಿ ಪೌತಿ ಖಾತೆಗಳನ್ನು ನೀಡಿ ರೈತರಿಗೆ ಕಿರುಕುಳ ಮತ್ತು ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದ ರೈತರು ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಶಂಕ, ಜಾಗಟೆ ಮತ್ತು ತುತ್ತೂರಿ ಊದಿ ರೈತರ ಪಾಲಿಗೆ ಸರ್ಕಾರ ಸತ್ತಿದೆ. ಗೋವಿಂದಾ.., ಗೋವಿಂದಾ.. ಎಂದು ಕೂಗುವ ಮೂಲಕ ಮಿನಿ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿ ಆಕ್ರೋಶ ಹೊರ ಹಾಕಿದರು.

ರೈತ ನಾಯಕ ಎಂ.ವಿ.ರಾಜೇಗೌಡ ಮಾತನಾಡಿ, ಟಿಎಪಿಸಿಎಂಎಸ್‌ನ ಗೋಡನ್‌ನಿಂದ ಎತ್ತುವಳಿಯಾಗಿ ಗವೀಮಠದ ವಸತಿ ಶಾಲೆಗೆ ಸೇರಬೇಕಾದ ಅಕ್ಕಿ ಪಟ್ಟಣದ ಖಾಸಗಿ ರೈಸ್ ಮಿಲ್‌ಗೆ ಹೋಗಿದೆ. ಅಕ್ಕಿ ತುಂಬಿದ ಲಾರಿ ಸಮೇತ ಪತ್ತೆ ಹಚ್ಚಿ ರೈತ ಕಾರ್ಯಕರ್ತರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೂ ತನಿಖೆಯಾಗಿಲ್ಲ. ಈ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, ತಾಲೂಕಿನ ಚೌಡಘಟ್ಟ, ಸಿಂಧಘಟ್ಟ ಮತ್ತಿತರ ಕಡೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಿಗರಾದ ಶಶಿಕುಮಾರ್, ಈರಣ್ಣ ನಕಲಿ ವಂಶವೃಕ್ಷಗಳನ್ನು ಸೃಷ್ಟಿಸಿ ಪೌತಿದಾರರ ಕುಟುಂಬಕ್ಕೆ ಸೇರಬೇಕಾದ ಆಸ್ತಿಯನ್ನು ಇತರರ ಹೆಸರಿಗೆ ಖಾತೆ ಮಾಡಿ ನೈಜ ವಂಶಸ್ಥರು ಕೋರ್ಟು ಕಚೇರಿ ತಿರುಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.


ಈ ಬಗ್ಗೆ ರೈತಸಂಘ ಕಳೆದ ಒಂದೂವರೆ ತಿಂಗಳು ದಾಖಲೆಗಳ ಸಮೇತ ಮಾಹಿತಿ ನೀಡಿ ಆರ್.ಐ ಮತ್ತು ವಿ.ಎಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರೂ ತಾಲೂಕಿನ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಇದುವರೆಗೂ ಯಾವುದೇ ಕ್ರಮ ಜರುಗಿಸದೆ ಭ್ರಷ್ಟ ನೌಕರರ ಹಿತ ಕಾಯುತ್ತಿದ್ದಾರೆ. ಕಂದಾಯ ಇಲಾಖೆ ನೌಕರರ ವಿರುದ್ಧ ಕ್ರಮ ಆಗುವವರೆಗೂ ರೈತ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ತಾಲೂಕಿನಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸ ಆಗುತ್ತಿಲ್ಲ. ಬಹುತೇಕ ಅಧಿಕಾರಿಗಳು ದಳ್ಲಾಳಿಗಳನ್ನು ನೇಮಕ ಮಾಡಿಕೊಂಡು ಕಮೀಷನ್ ದಂಧೆಯಲ್ಲಿ ಮುಳುಗಿದ್ದಾರೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಭ್ರಷ್ಟರ ರಕ್ಷಣೆಗೆ ನಿಂತಿದ್ದಾರೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಏ.14 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆಸಿ ರೈತರ ಸಮ್ಮುಖದಲ್ಲಿಯೇ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಅಲ್ಲಿಯವರೆಗೂ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಮನವಿ ತಿರಸ್ಕರಿಸಿರುವ ರೈತರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ, ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕೃಷ್ಣಾಪುರ ರಾಜಣ್ಣ, ಸಿಂಧುಘಟ್ಟ ಮುದ್ದುಕುಮಾರ್, ನಗರೂರು ಕುಮಾರ್, ಹೊನ್ನೇಗೌಡ, ಬ್ಯಾಲದಕೆರೆ ಶಿವಣ್ಣ,ಚೌಡೇನಹಳ್ಳಿ ಕೃಷ್ಣೇಗೌಡ, ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ಹಿರೀಕಳಲೆ ಬಸವರಾಜು, ಲಕ್ಷ್ಮೀಪುರ ನಾಗರಾಜು, ನಾರಾಯಣಸ್ವಾಮಿ ಸೇರಿದಂತೆ ಹಲವರಿದ್ದರು.