ಅವ್ಯವಹಾರ ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

| Published : Feb 09 2024, 01:46 AM IST

ಸಾರಾಂಶ

2017-18ನೇ ಸಾಲಿನಿಂದ ಇಲ್ಲಿಯವರೆಗೆ ಯಶಸ್ವಿಯಾಗಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ಎಲ್ಲ ಸದಸ್ಯರ ಸಹಕಾರದೊಂದಿಗೆ ₹307 ಕೋಟಿ ಕಂತು ಮರುಪಾವತಿಸಿ ಒಂದೇ ಒಂದು ಅವ್ಯವಹಾರವಿಲ್ಲದೇ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಸತ್ಯ ಅರಿತು ಅವ್ಯವಹಾರದ ಆರೋಪ ಮಾಡಬೇಕು. ಒಂದೇ ಒಂದು ಅವ್ಯವಹಾರ ಆಧಾರ ಸಮೇತ ಸಾಬೀತಾದಲ್ಲಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

2017-18ನೇ ಸಾಲಿನಿಂದ ಇಲ್ಲಿಯವರೆಗೆ ಯಶಸ್ವಿಯಾಗಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ಎಲ್ಲ ಸದಸ್ಯರ ಸಹಕಾರದೊಂದಿಗೆ ₹307 ಕೋಟಿ ಕಂತು ಮರುಪಾವತಿಸಿ ಒಂದೇ ಒಂದು ಅವ್ಯವಹಾರವಿಲ್ಲದೇ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಸತ್ಯ ಅರಿತು ಅವ್ಯವಹಾರದ ಆರೋಪ ಮಾಡಬೇಕು. ಒಂದೇ ಒಂದು ಅವ್ಯವಹಾರ ಆಧಾರ ಸಮೇತ ಸಾಬೀತಾದಲ್ಲಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಾಲ್ಕು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.30ರಷ್ಟು ಧನಸಹಾಯ ಹಾಗೂ ಬ್ಯಾಂಕ್‌ಗಳ ಮೂಲಕ ಶೇ.70 ರಷ್ಟು ಸಾಲ ಮಾಡಿ ಶತಾಯಗತಾಯ ಶ್ರಮವಹಿಸಿ ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಕಾರ್ಖಾನೆ 2017-18 ನೇ ಸಾಲಿನಲ್ಲಿ ಕಾರ್ಯಾರಂಭಗೊಂಡಿತ್ತು. ಈ ಭಾಗದ ರೈತರ ಬಯಕೆ ಈಡೇರಿಸಿದ ತೃಪ್ತಿ ನನ್ನಲ್ಲಿದೆ. ಅದರಂತೆ ಈ ಭಾಗದ ಜನರು ನನ್ನನ್ನು ಕೈಬಿಡಲಿಲ್ಲ. ನಾನು ಪ್ರಾಮಾಣಿಕವಾಗಿ ನನ್ನ ಮಗುವಿನಂತೆ ಜೋಪಾನ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಜೋಪಾನ ಮಾಡಿಕೊಂಡು ಹೋಗುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಕಾರ್ಖಾನೆ ಅಭಿವೃದ್ಧಿ ಜೊತೆಯಲ್ಲಿ ರೈತರ ಕಬ್ಬಿಗೆ ಎಲ್ಲ ಕಾರ್ಖಾನೆಯಗಿಂತಾ ಹೆಚ್ಚು ಬೆಲೆ ನಿಗದಿ ಮಾಡಿ ಯಾವುದೇ ಬಾಕಿ ಇಲ್ಲದಂತೆ ಹಾಗೂ ಬ್ಯಾಂಕಿನಿಂದ ಪಡೆದ ಸಾಲವನ್ನು ಪ್ರತಿ ವರ್ಷ ಅಸಲು ಹಾಗೂ ಬಡ್ಡಿ ತುಂಬಿಕೊಂಡು ಕಟ್‌ ಬಾಕಿ ಇಲ್ಲದಂತೆ ನೋಡುಕೊಂಡು ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಮುಂದೆ ಭೀಮಾಶಂಕರ ಕಾರ್ಖಾನೆ ಅಡಿಯಲ್ಲಿ ಇಥಿನಾಲ್‌ ಪ್ಲಾಂಟ್ ಪ್ರಾರಂಭಗೊಳ್ಳದೆ. ಕಾರ್ಖಾನೆಯ ಹಣ ಬಳಿಸದೇ ಸರಕಾರ ಅನುದಾನದಲ್ಲಿ ಕಾರ್ಖಾನೆಯ ರಸ್ತೆಗಳು ಹಾಗೂ ವಿವಿಧ ಅಭಿವೃದ್ದಿ ಕಾರ್ಯ ಮಾಡತ್ತಾ ಬಂದಿದ್ದೇವೆ ಎಂದರು.

ಶಸಕ್ತ ವಿರೋಧ ಬಣವಾಗಿ ಬೆಳೆಯಲಿ:

13 ಜನ ಸದಸ್ಯ ಬಲ ಹೊಂದಿದ ಸದಸ್ಯರಲ್ಲಿ 5 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 8 ಅಭ್ಯರ್ಥಿಗಳಲ್ಲಿ ಮಹಿಳಾ ಮೀಸಲು ಸ್ಥಾನಕ್ಕೆ ಸಲ್ಲಿಸಿದ ಅಭ್ಯರ್ಥಿ ಧಾನಮ್ಮ ಪಾಟೀಲ ಕಣದಿಂದ ಹಿಂದೆ ಸರಿದು ಅವರು ನಮ್ಮ ಬಣಕ್ಕೆ ಬೇಷರತ್ ಬೆಂಬಲ ಸೂಚಿಸಿದ್ದಾರೆ. ವಿರೋಧ ಬಣಕ್ಕೆ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಾಕತ್ತೂ ಇಲ್ಲದಿರುವುದು ಮಾತ್ರ ಹಾಸ್ಯಾಸ್ಪದ. ಕೇವಲ 4 ಸ್ಥಾನಕ್ಕೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಮುಂದೆಯಾದರೂ ಒಂದು ಶಸಕ್ತ ವಿರೋಧ ಬಣವಾಗಿ ಬೆಳೆಯಲಿ. ಆದೇವರು ಅವರಿಗೆ ಆ ಶಕ್ತಿ ದಯಪಾಲಿಸಲಿ ಎಂದು ಆಸಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಸದಾ ತಮ್ಮ ಮಗನಂತೆ ಬೆಳಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಬಣ ಈಗಾಗಲೇ ಜಯಭೇರಿ ಭಾರಿಸಿದೆ. ಯಾವುದೇ ಅನುಮಾನ ಬೇಡ. ಆದರೂ ಫೆ.11 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾರ್ಖಾನೆಯ ಸದಸ್ಯ ರೈತರನ್ನು ಕರೆತಂದು ಯಶವಂತರಾಯಗೌಡ ಪಾಟೀಲರ ಬಣವನ್ನು ಜಯಶಾಲಿಗಳನ್ನಾಗಿಸಲು ಶ್ರಮಿಸಬೇಕು. ಅಲ್ಲದೇ ಫೆ.10 ರಂದು ಕಾರ್ಖಾನೆಯ ಕಚೇರಿಯಲ್ಲಿ ಸದಸ್ಯರ ಗುರುತಿನ ಚೀಟಿ ನೀಡುತ್ತಾರೆ. ಎಲ್ಲ ಸದಸ್ಯ ಮತದಾರರು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಶಿದ್ದಣ್ಣ ಬಿರಾದಾರ, ರೇವಗೊಂಡಪ್ಪ ಪಾಟೀಲ, ಬಸವರಾಜ ಧನಶ್ರೀ, ಅಶೋಕ ಗಜಕೋಶ, ಲಲಿತಾ ನಡಗೇರಿ, ಸರೋಜನಿ ಪಪಾಟೀಲ, ಮುಖಂಡರಾದ ಬಿ.ಎಂ ಕೋರೆ, ಭೀಮಾಶಂಕರ ಬಿರಾದಾರ, ಭೀಮೂಗೌಡ ಬಿರಾದಾರ, ಸಾಹೇಬಗೌಡ ಪಾಟೀಲ, ಸುರೇಶಗೌಡ ಪಾಟೀಲ, ವಿಶ್ವನಾಥ ಬಿರಾದಾರ, ಬಾಬುಗೌಡ ಪಾಟೀಲ, ರಾಜೂ ಡೋಣಗಾಂವ, ಬಸುಸಾಹುಕಾರ ಬಿರಾದಾರ, ಅಪ್ಪು ನಡಗೇರಿ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.

---

ಕೋಟ್‌

ಮಹಿಳಾ ಮೀಸಲ ಸ್ಥಾನಕ್ಕೆ ಸ್ಪರ್ಧಿಸಿದ್ದ ಧಾನಮ್ಮ ಪಾಟೀಲ ಅವರು ಕಣದಿಂದ ಹಿಂದೆ ಸರಿದು ನಮಗೆ ಬೆಂಬಲ ಸೂಚಿಸಿದ್ದು ಹೃದಯಪೂರ್ವಕವಾಗಿ ಸ್ವಾಗತಿಸಿ ಧನ್ಯವಾದಗಳು ಸಲ್ಲಿಸುತ್ತೇನೆ. ಅಲ್ಲದೇ ಕಾರ್ಖಾನೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಅಭ್ಯರ್ಥಿಗಳು ಹಾಗೂ ನಮ್ಮ ಮನವಿಗೆ ಸ್ಪಂದಿಸಿ ಕಣದಿಂದ ಹಿಂದೆ ಸರಿದ ಸ್ಪರ್ಧಾ ಆಕಾಂಕ್ಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

- ಯಶವಂತರಾಯಗೌಡ ಪಾಟೀಲ ಇಂಡಿ ಶಾಸಕ.