ಶಾಸಕರ ಭೇಟಿಗೆ ಸರ್ವ ಸದಸ್ಯರ ನಿರ್ಣಯ

| Published : Jan 01 2025, 12:00 AM IST

ಸಾರಾಂಶ

ಪಟ್ಟಣದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕ ಭೀಮಶೇನ ಚಿಮ್ಮನಕಟ್ಟಿ ಅವರ ಮನವೊಲಿಸಲು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲ ಸೇರಿ ಬಾದಾಮಿಗೆ ಅವರ ಭೇಟಿಗೆ ಹೋಗೋಣ ಎಂದು ಸರ್ವ ಸದಸ್ಯರು ಏಕಾಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕ ಭೀಮಶೇನ ಚಿಮ್ಮನಕಟ್ಟಿ ಅವರ ಮನವೊಲಿಸಲು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲ ಸೇರಿ ಬಾದಾಮಿಗೆ ಅವರ ಭೇಟಿಗೆ ಹೋಗೋಣ ಎಂದು ಸರ್ವ ಸದಸ್ಯರು ಏಕಾಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಕಚೇರಿಯ ಸಭಾಭವನದಲ್ಲಿ ಮಂಗಳವಾರ ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು. ಸದಸ್ಯ ಪ್ರಶಾಂತ ಜವಳಿ ವಿಷಯವೊಂದನ್ನು ಸಭೆಯ ಗಮನಕ್ಕೆ ತಂದು, ಮತಕ್ಷೇತ್ರದ ಅಭಿವೃದ್ಧಿಗೆ ಪೌರಾಡಳಿತ ನಿರ್ದೇಶನಾಲಯದಿಂದ ₹5 ಕೋಟಿ ಶಾಸಕರಿಗೆ ಅನುದಾನ ಮಂಜೂರಾಗಿದ್ದು, ಅದರಲ್ಲಿ ಗುಳೇದಗುಡ್ಡ ಪಟ್ಟಣಕ್ಕೆ ₹1.7ಕೋಟಿ ಅನುದಾನವನ್ನು ಶಾಸಕರು ಮಂಜೂರಾಗಿದೆ. ಆದರೆ, ಶಾಸಕರು ಈ ಅನುದಾನದಲ್ಲಿ ಸುಮಾರು ಎರಡು ಡಿವಿಜನ್‌ಗಳಿಗೆ ಮಾತ್ರ ₹69 ಲಕ್ಷ ಅನುದಾನವನ್ನು ಮಂಜೂರಿ ಮಾಡಿ ಉಳಿದ ಅನುದಾನವನ್ನು ಉಳಿದ 4 ಡಿವಿಜನ್ ಗಳಿಗೆ ಕನಿಷ್ಠ ಅನುದಾನ ನೀಡಿ, ಉಳಿದ ಸುಮಾರು 16-17 ಡಿವಿಜನ್‌ಗಳನ್ನು ಕಡೆಗಣಿಸಿದ್ದಾರೆ. ಎಲ್ಲ ಡಿವಿಜನ್‌ಗಳಿಗೆ ಸಮಾನವಾಗಿ ಹಂಚಿ ಪಟ್ಟಣದ ಅಭಿವೃದ್ಧಿಗೆ ಶಾಸಕರು ಸಹಕರಿಸಬೇಕಿತ್ತು ಎಂದರು. ಆಗ ಎಲ್ಲ ಸದಸ್ಯರೂ ಪ್ರಶಾಂತ ಜವಳಿಯವರ ವಿಷಯಕ್ಕೆ ಹೌದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರೊಂದಿಗೆ ಎಲ್ಲ ಸದಸ್ಯರೂ ಬಾದಾಮಿಗೆ ಹೋಗಿ ಶಾಸಕರನ್ನು ಕಂಡು ವಿಷಯವನ್ನು ಮನವರಿಕೆ ಮಡೋಣ ಎಂಬ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ಒಟ್ಟು 17 ವಿಷಯಗಳ ಕುರಿತು ಚರ್ಚೆ ನಡೆಯಿತು. ಕೆಲವು ವಿಷಯಗಳನ್ನು ಮುಂದೂಡಿದರೆ ಇನ್ನೂ ಕೆಲವು ವಿಷಯಗಳಿಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಕೆಲ ವಿಷಯಗಳ ನಿರ್ಣಯವನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿ ನಿರ್ಣಯ ಕೈಗೊಳ್ಳಲಿ ಎಂದು ನಿರ್ಣಯ ಕೈಗೊಂಡರು. ನಮ್ಮ ಕ್ಲಿನಿಕ್ ಯೋಜನೆಯಂತೆ ಪಟ್ಟಣಕ್ಕೆ ಮಂಜೂರಾದ ಆಸ್ಪತ್ರೆ ಜನಸಂದಣಿಯಿಲ್ಲದ ಶಿಕ್ಷಕ ನಗರದಲ್ಲಿ ಮಾಡಲಾಗಿದೆ. ಅದನ್ನು ಜನಸಂದಣಿ ಇರುವ ಸ್ಥಳಕ್ಕೆ ಸ್ಥಳಾಂತರ ಮಾಡಲು ಸೂಚಿಸಲಾಯಿತು. ಜಿ.ಎಸ್.ಟಿ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಪಟ್ಟಂತೆ ಇದನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಮುಂದಿನ ಸಭೆಯಲ್ಲಿ ನಿರ್ಧರಿಸಲು ಒಪ್ಪಿಗೆ ಸೂಚಿಸಲಾಯಿತು. ನೂತನ ಸ್ಥಾಯಿ ಸಮಿತಿ ರಚನೆ ವಿಷಯ ಮುಂದೂಡಲಾಯಿತು. ಭೂಪರಿವರ್ತನೆ ಮಾಡಿದ ನಿವೇಶನಗಳಲ್ಲಿ ನಾಗರಿಕ ಸೌಲಭ್ಯಕ್ಕೆ ಬಳಸಲು ಇರುವ ಸೈಟ್‌ಗಳನ್ನು ಸರ್ಕಾರೇತರ ಸಾರ್ವಜನಿಕ ಸಂಘ, ಸಂಸ್ಥೆಗಳಿಗೆ ಕೊಡಲು ಬರುವುದಿಲ್ಲ. ಸರ್ಕಲ್‌ಗೆ ವಿವಿಧ ಗಣ್ಯರ ಹೆಸರಿಡಲು ನಿರ್ಬಂಧಿಸಲಾಗಿದೆ. ಏನೇ ಮಾಡಿದರೂ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಬರೆದು ನಂತರ ಬಳಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿ ಎ.ಎಚ್.ಮುಜಾವರ ಸರ್ಕಾರದ ಆದೇಶವನ್ನು ಸಭೆಗೆ ಓದಿ ಹೇಳಿದರು. ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿಸುವ ವಿಷಯ, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪುರಸಭೆ ಸೈಟ್ ನೀಡುವ ವಿಷಯ, ಗುಳೇದಗುಡ್ಡ ಪಟ್ಟಣದ ಹದ್ದಿಯನ್ನು ವಿಸ್ತರಿಸುವ ವಿಷಯ, ಕನ್ನಡಭವನ ನಿರ್ಮಾಣಕ್ಕೆ, ನಿವೇಶನ ನೀಡುವುದು, ಅಪೂರ್ಣಗೊಂಡ ಕಂದಗಲ್ ಹನಮಂತರಾಯ ರಂಗಮಂದಿರ, ಗಾಂಧಿಭವನ ನಿರ್ಮಾಣ, ಬುದ್ದಿಮಾಂದ್ಯ ಮಕ್ಕಳಿಗೆ ಪುರಸಭೆಯ ಶೇ.5ರ ಯೋಜನೆಯಡಿ ಪ್ರತಿತಿಂಗಳು ನಿರ್ವಹಣಾ ಭತ್ಯೆ ನೀಡುವ ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನೂ ಹಲವು ಮಹತ್ವದ ವಿಷಯಗಳು ಚರ್ಚೆಯಾಗಿ ಸರ್ವನುಮತದ ಒಪ್ಪಿಗೆ ಪಡೆದವು. ಇದೇ ಸಂದರ್ಭದಲ್ಲಿ ನಾಮನಿರ್ದೇಶಿತ 5 ಜನ ಸದಸ್ಯರಿಗೆ ಸನ್ಮಾನಿಸಲಾಯಿತು.ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸದಸ್ಯರಾದ ಉಮೇಶ ಹುನಗುಂದ, ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ, ವಿದ್ಯಾ ಮುರಗೋಡ, ಕಾಶೀನಾಥ ಕಲಾಲ, ಅಮರೇಶ ಕವಡಿಮಟ್ಟಿ, ಶಿಲ್ಪಾ ಹಳ್ಳಿ, ವಿಠ್ಠಲಸಾ ಕಾವಡೆ, ಯಲ್ಲವ್ವ ಗೌಡರ, ರಾಜವ್ವ ಹೆಬ್ಬಳ್ಳಿ, ನಾಗರತ್ನಾ ಲಕ್ಕುಂಡಿ ಸೇರಿದಂತೆ 23 ಸದಸ್ಯರಲ್ಲಿ 20 ಜನ ಸದಸ್ಯರು ಹಾಜರಿದ್ದರು. ಅಭಿಯಂತರ ಎಂ.ಜಿ.ಕಿತ್ತಲಿ, ಮ್ಯಾನೇಜರ್‌ ಮುದ್ದೇಬಿಹಾಳ, ಚಂದರಗಿ, ಕಟ್ಟಿಮನಿ ಸೇರಿದಂತೆ ವಿವಿಧ ಶಾಖೆಗಳ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.