ಸಾರಾಂಶ
ರಾಘು ಕಾಕರಮಠ
ಅಂಕೋಲಾ: ಹೊಸ ವರ್ಷದ ಸಂಭ್ರಮಾಚರಣೆಗೆ ಒಂದೇ ದಿನ ಬಾಕಿ ಇರುವಾಗಲೆ ಅಂಕೋಲಾ ಹಾಗೂ ಗೋಕರ್ಣದ ರೆಸಾರ್ಟ್ ಹಾಗೂ ಹೋಂಸ್ಟೇಗಳು ಭರ್ತಿಯಾಗಿದೆ. ವರ್ಷಾಚರಣೆಯ ತಡರಾತ್ರಿಯ ಸಂಭ್ರಮವನ್ನು ಕಾವೇರಿಸಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದು ಸಂಭ್ರಮಾಚರಣೆಗೆ ಇನ್ನಷ್ಟು ಮೆರಗು ಬಂದಿದೆ.
ವರ್ಷಾಚರಣೆಯ ಸಂಭ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದ ಭಾಗಗಳು, ಅರಣ್ಯದ ಮಧ್ಯದಲ್ಲಿ ನೆಲೆಯೂರಿರುವ ಹೋಂ ಕಾಟೇಜ್‌ಗಳು ಹೇಳಿ ಮಾಡಿಸಿದ ತಾಣ. ಹೀಗಾಗಿಯೇ ರಾಜ್ಯ- ಹೊರ ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ಹೊಸ ವರ್ಷವನ್ನು ಸ್ವಾಗತಿಸಲು ಉಮೇದು ತೋರುತ್ತಾರೆ. ಹಾಗೆಯೇ ಸ್ವಚ್ಛಂದ, ನಿರ್ಭೀತ ಆಚರಣೆಗೆ ಉಕ ಜಿಲ್ಲೆ ಪ್ರಶಸ್ತವಾಗಿ ಗಮನ ಸೆಳೆದಿದೆ.
ಕಳೆದ ಎರಡು ತಿಂಗಳಿಂದ ಅನೇಕ ಪ್ರವಾಸಿಗರು ಆನ್‌ಲೈನ್ ಮೂಲಕ ತಮ್ಮ ಬರುವಿಕೆಯನ್ನು ಖಾತ್ರಿ ಪಡಿಸಿಕೊಂಡು ರೆಸಾರ್ಟ್, ಹೋಂಸ್ಟೇಗಳು ಬುಕ್ ಮಾಡಿಕೊಂಡಿರುವುದು ತಿಳಿದುಬಂದಿದೆ. ಹೊಸ ವರ್ಷ ಆಚರಣೆಗಾಗಿ ಮುರ್ಡೇಶ್ವರ, ಅಂಕೋಲಾ, ಗೋಕರ್ಣ ಹಾಗೂ ಕಾರವಾರದ ಬಹುತೇಕ ಲಾಡ್ಜ್‌ಗಳು, ರೆಸಾರ್ಟ್‌ಗಳು ಹಾಗೂ ಕಾಟೇಜ್‌ಗಳು ಭರ್ತಿಯಾಗಿವೆ. ಎರಡು ತಿಂಗಳ ಹಿಂದಿನಿಂದಲೇ ಬುಕಿಂಗ್ ಆಗಿದ್ದರಿಂದಾಗಿ ರೆಸಾರ್ಟ್ ಮಾಲೀಕರು ಖುಷಿಯಲ್ಲಿ ಇದ್ದಾರೆ.
ವಿದೇಶಿಗರ ಪ್ರಮಾಣ ಕಡಿಮೆ
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಈ ಹಿಂದೆ ವಿದೇಶಿಗರ ಪಾಲೆ ಜಾಸ್ತಿಯಾಗಿತ್ತು. ಗೋಕರ್ಣ ಹಾಗೂ ಗೋವಾ ರಾಜ್ಯದಲಿ ವಿದೇಶಿಗರೇ ಹೆಚ್ಚಾಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದೆದ್ದು ಪ್ರವಾಸೋದ್ಯಮಕ್ಕೆ ರಂಗನ್ನು ತರುತ್ತಿದ್ದರು. ಆದರೆ, ಕೋರೊನಾ ಪರಿಣಾಮ ನಂತರದ ವರ್ಷದಿಂದ ವಿದೇಶಿಗರ ಆಗಮನ ಕಡಿಮೆಯಾಗಿದೆ.
ಮಾದಕ ವಸ್ತು
ಹೊಸ ವರ್ಷದ ಸಂಭ್ರಮದಲ್ಲಿ "ಮಾದಕ ವಸ್ತು " ಮಾಫಿಯಾಗಳ ಸೋಂಕು ತಗುಲದಂತೆ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅಶಿಸ್ತು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು
ವಸಂತ ಆಚಾರ, ಸಿಪಿಐ ಗೋಕರ್ಣ ಠಾಣೆ.
ಟ್ರಾಫಿಕ್ ಸಮಸ್ಯೆ
ಕಳೆದ 2 ತಿಂಗಳಿಂದಲೆ ರೆಸಾರ್ಟ್‌ಗಳು ಆನ್‌ಲೈನ್ ಮೂಲಕ ಕಾಯ್ದಿರಿಸಲಾಗಿದೆ. ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ. ಡಿ. ೨೪ರಿಂದಲೆ ರೆಸಾರ್ಟ್‌ಗಳು ಭರ್ತಿಗೊಂಡಿದೆ.
ದಾಮು ಗೌಡ, ಮಾಲೀಕರು, ಹೇಮಶ್ರೀ ಬೀಚ್ ರೆಸಾರ್ಟ್, ಗೋಕರ್ಣ