ಸಾರಾಂಶ
ಹೂವಿನಹಡಗಲಿ: ಗ್ರಾಮೀಣ ಪ್ರದೇಶದಲ್ಲಿ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದೆ. ಆದರೆ ಕಾಲೇಜಿಗೆ ನೀಡಿರುವ ಮಾನವ ಸಂಪನ್ಮೂಲ ಸರಿಯಾಗಿ ಸದ್ಬಳಕೆಯಾಗಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಇಲ್ಲಿನ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ, ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿ, ಈ ಸರ್ಕಾರದಲ್ಲಿ ಅಭಿವೃದ್ಧಿಗಾಗಿ ಬಿಜೆಪಿ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಆದರೂ ಬೇರೆ ಬೇರೆ ಯೋಜನೆಗಳಲ್ಲಿ ಅನುದಾನಗಳನ್ನು ಉಳಿಸಿ, ಈ ಕಾಲೇಜು ಅಭಿವೃದ್ಧಿಗೆ ಅನುದಾನ ನೀಡಿ, ಬೆಂಗಳೂರು ಮಟ್ಟದಲ್ಲಿರುವ ಕಾಲೇಜಿನಂತೆ ಅಭಿವೃದ್ಧಿ ಮಾಡುತ್ತಿದ್ದೇನೆ. ಜತೆಗೆ ಕಾಲೇಜಿಗೆ ಬಂದಿರುವ ಅತಿಥಿ ಉಪನ್ಯಾಸಕರು ಹಾಗೂ ಸರ್ಕಾರದಿಂದ ನೇಮಕಾತಿಯಾದ ಉಪನ್ಯಾಸಕರು ಮತ್ತು ಪ್ರಾಚಾರ್ಯರು, ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಿ, ಪಾಠ ಪ್ರವಚನ ಮಾಡಬೇಕು, ನೀಡಿರುವ ಸಂಪನ್ಮೂಲಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳದಿದ್ದರೆ ಕಾಲೇಜು ಅಭಿವೃದ್ಧಿಗೆ ಶ್ರಮಿಸಿದ್ದು ಸಾರ್ಥಕವಾಗುವುದಿಲ್ಲ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.ವಿಜಯನಗರ ಸಾಮ್ರಾಜ್ಯ ವಿಶ್ವದಲ್ಲೇ ಅತಿ ಶ್ರೀಮಂತವಾಗಿತ್ತು. ಆದರೆ ಹೂವಿನಹಡಗಲಿ ತೀರಾ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ ಹೊಂದಿದೆ. ಆದರಿಂದ ತಾಲೂಕು ಅಭಿವೃದ್ಧಿ ಹೊಂದಲು ಎಲ್ಲರೂ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಎಲ್ಲವೂ ಸಾಧ್ಯ ಎಂದ ಅವರು, ಕಾಲೇಜು ದಿನಗಳು ನಮ್ಮ ಭವಿಷ್ಯದ ಬದುಕನ್ನು ರೂಪಿಸುವ ಶಕ್ತಿ ಇದೆ. ಪ್ರತಿಯೊಬ್ಬರು ಹೆಚ್ಚು ಶ್ರಮವಹಿಸಿ ಅಭ್ಯಾಸ ಮಾಡಿ ನಾಡಿಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕೆಂದು ಹೇಳಿದರು.
ಈಗಾಗಲೇ ಕಾಲೇಜಿನಲ್ಲಿ ಇಡೀ ಜಿಲ್ಲೆಯಲ್ಲೇ ಇಲ್ಲದಂತಹ ಅಡಿಟೋರಿಯಂ ನಿರ್ಮಾಣ ಮಾಡಲಾಗಿದೆ. ಪ್ರಯೋಗ ಶಾಲೆ, ಆಟದ ಮೈದಾನ ಅಭಿವೃದ್ಧಿ ಸೇರಿದಂತೆ ಒಟ್ಟಾರೆ 9 ಕೋಟಿ ರು. ಕಾಮಗಾರಿ ನಡೆಯುತ್ತಿದೆ. ಇನ್ನು ಹೆಚ್ಚು ಅಭಿವೃದ್ಧಿ ಮಾಡಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಸಾಧನೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತೇನೆಂದು ಹೇಳಿದರು.ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿದ್ದ ಅಬ್ದುಲ್ ಮುತಾಲಿಬ್ ಮಾತನಾಡಿ, 2007ರಲ್ಲಿ ಆರಂಭವಾಗಿದ್ದ ಕಾಲೇಜಿಗೆ ಒಬ್ಬ ವಿದ್ಯಾರ್ಥಿ ದಾಖಲಾತಿ ಇರಲಿಲ್ಲ. ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿಂದ ವಿದ್ಯಾರ್ಥಿಗಳ ಕರೆ ತಂದು ದಾಖಲಾತಿ ಮಾಡಿಕೊಂಡಿದ್ದೇವೆ. ಯಾವ ಮೂಲಭೂತ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲಿ ಆರಂಭವಾದ ಕಾಲೇಜಿಗೆ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಭೂದಾನ ಮಾಡಿದ್ದರಿಂದ ಇಂದು ದೊಡ್ಡ ಮಟ್ಟದ ಕಾಲೇಜು ಕಟ್ಟಡ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ನಾವು ಮೊದಲು ಗಿಡದ ನೆರಳಲ್ಲಿ ಪಾಠ ಮಾಡಿದ್ದೇನೆ, ಇಂದು ಉತ್ತಮ ಕಟ್ಟಡ ನಿರ್ಮಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಮೊದಲು ತಂದೆ ತಾಯಿಗಳಿಗೆ ಗೌರವ ನೀಡುವುದನ್ನು ಕಲಿಯುವ ಜತೆಗೆ, ಶಿಕ್ಷಣ ಪಡೆದ ಸಂಸ್ಥೆಯನ್ನು ನೆನೆಯಬೇಕಿದೆ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ₹1 ಲಕ್ಷ ಠೇವಣಿ ನೀಡಿದ್ದೇನೆ. ಉಳಿದ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಬೇರೆಯವರೊಂದಿಗೆ ಹಣವನ್ನು ಠೇವಣಿ ಇಡುವಂತಹ ಕೆಲಸ ಮಾಡುತ್ತೇನೆ. ಅದನ್ನು ಪಡೆದುಕೊಳ್ಳುವಷ್ಟು ಬುದ್ದಿವಂತಿಕೆ ನೀಡು ಪಡೆದುಕೊಳ್ಳಬೇಕೆಂದು ಹೇಳಿದರು.ಕಾಲೇಜು ಭೂದಾನಿ ಎಂ.ಪಿ. ಸುಮಾ ಮಾತನಾಡಿ, ಕಾಲೇಜು ಆರಂಭದ ದಿನಗಳಲ್ಲಿ ಕೆಲಸ ಮಾಡಿರುವ ಪ್ರಾಚಾರ್ಯರಂತೆ ಎಲ್ಲರೂ ಶಿಕ್ಷಣಕ್ಕಾಗಿ ಶ್ರಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ವಿಜಯಕುಮಾರ, ವಾರದ ಗೌಸ್ ಮೋಹಿದ್ದೀನ್, ಆರ್.ಪಕ್ಕೀರಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ತಳವಾರ ಮಹಾಂತೇಶ, ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್‌ಬೀ, ಕೆ.ಅಯ್ಯನಗೌಡ, ನರ್ಸಿನ್, ಎ.ರಮೇಶ ಸೇರಿದಂತೆ ಇತರರಿದ್ದರು.ಉಪನ್ಯಾಸಕ ವೆಂಕಟೇಶ ಪ್ರಾಸ್ತಾವಿಕ ಮಾತನಾಡಿದರು, ನಾಗವೇಣಿ ನಿರೂಪಿಸಿದರು, ಡಾ.ಭೀಮಣ್ಣ ಸ್ವಾಗತಿಸಿದರು.