ಶಿಕ್ಷಕ ಓದಿಸುವ ಅಭ್ಯಾಸ ಬೆಳೆಸಿಕೊಂಡರೆ ವೃತ್ತಿಗೆ ಗೌರವ

| Published : Sep 06 2024, 01:01 AM IST

ಶಿಕ್ಷಕ ಓದಿಸುವ ಅಭ್ಯಾಸ ಬೆಳೆಸಿಕೊಂಡರೆ ವೃತ್ತಿಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವು ಶಿಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸೋಲುತ್ತಿದ್ದೇವೆ. ಶಿಕ್ಷಣದ ತತ್ವಾದರ್ಶಗಳಿಗೆ ಒತ್ತುಕೊಟ್ಟು ವೃತ್ತಿಯಲ್ಲಿ ಶಿಕ್ಷಕರು ಮುಂದುವರಿಯದೆ ಇರುವುದು ದುರದೃಷ್ಟಕರವಾಗಿದೆ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಸಿದ್ದಪ್ಪ ಹೇಳಿದರು.

ತುಮಕೂರು: ಭಾರತವು ಶಿಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸೋಲುತ್ತಿದ್ದೇವೆ. ಶಿಕ್ಷಣದ ತತ್ವಾದರ್ಶಗಳಿಗೆ ಒತ್ತುಕೊಟ್ಟು ವೃತ್ತಿಯಲ್ಲಿ ಶಿಕ್ಷಕರು ಮುಂದುವರಿಯದೆ ಇರುವುದು ದುರದೃಷ್ಟಕರವಾಗಿದೆ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಸಿದ್ದಪ್ಪ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕನಾದವನು ಓದುವ, ಓದಿಸುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ಬರುತ್ತದೆ. ಕೊರತೆಗಳಿಗೆ ತಲೆಕೆಡಿಸಿಕೊಳ್ಳದೆ ಪಾಠ-ಪ್ರವಚನಗಳಲ್ಲಿ ತಲ್ಲೀನರಾಗಬೇಕು. ಪ್ರಾಮಾಣಿಕತೆ ಪಾಲಿಸಬೇಕು ಎಂದರು.ವಿಶ್ವಗುರು ಶ್ರೇಯಸ್ಸಿಗೆ ಪಾತ್ರರಾದ ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ಅಮರ ಶಿಕ್ಷಕನೆಂದು ಹೆಮ್ಮೆಯಿಂದ ಹೇಳಬಹುದು. ಮಾನವತ್ವದಿಂದ ದೈವತ್ವಕ್ಕೆ ಏರಿದ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್‌ ಶಿಕ್ಷಕನ ಹುದ್ದೆಯಲ್ಲಿ ಆತ್ಮತೃಪ್ತಿ ಪಡೆದಿದ್ದರು ಎಂದರು.ವಿದ್ಯಾರ್ಥಿ ಜೀವನದಲ್ಲಿ ರಾಧಾಕೃಷ್ಣನ್‌ ಪಾಲಿಸಿಕೊಂಡು ಬಂದ ನೀತಿ ಮತ್ತು ಆಧ್ಯಾತ್ಮಿಕ ಕಾಳಜಿ ಎಂದರೆ, ತಮಗೆ ಬಂದ ವಿದ್ಯಾರ್ಥಿ ವೇತನದಲ್ಲಿ ಪುಸ್ತಕ ಕೊಂಡು ಓದುವುದು, ಬಡ ಸಹಪಾಠಿಗಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುವುದಾಗಿತ್ತು ಎಂದು ತಿಳಿಸಿದರು.ಮೈಸೂರು ವಿವಿಯ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಮಯವನ್ನು ಸುವರ್ಣ ಕಾಲವೆಂದು ಇಂದಿಗೂ ಪ್ರಸಿದ್ಧಿ. ಪ್ರಾದೇಶಿಕ ಭಾಷೆಯಲ್ಲಿ ಮಕ್ಕಳು ಕಲಿಯಬೇಕು. ಅಭಿವೃದ್ಧಿಗಾಗಿ ಶಿಕ್ಷಣ ಕಡ್ಡಾಯವೆಂದು ಪ್ರತಿಪಾದಿಸಿದ ಸಮಾಜಮುಖಿ ಶಿಕ್ಷಕ ಎಂದರು.ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಜವಾಬ್ದಾರಿಯ ದಿನವೆಂದು ಆಚರಿಸೋಣ. ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ತಯಾರಿಸೋಣ. ಗ್ರಾಮಕ್ಕೆ ಶಿಕ್ಷಕ ಮಾರ್ಗದರ್ಶಕನಾಗಿರುತ್ತಿದ್ದ ಕಾಲವೊಂದಿತ್ತು. ಉತ್ತಮ ವಿದ್ಯಾರ್ಥಿಗಳನ್ನು ಹೊರತರದೆ, ಸಂಬಳಕ್ಕಾಗಿ, ಸ್ವಾರ್ಥಕ್ಕಾಗಿ ದುಡಿಯುವ ಶಿಕ್ಷಕರನ್ನು ಕಂಡಾಗ ಬೇಸರವಾಗುತ್ತದೆ ಎಂದು ಹೇಳಿದರು.ವಿವಿ ಕುಲಸಚಿವೆ ನಾಹಿದಾಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಂಯೋಜಕ ಡಾ. ಎ. ಎಂ. ಮಂಜುನಾಥ, ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ ಉಪಸ್ಥಿತರಿದ್ದರು.