ಪೋಷಕರು, ಗುರುಗಳ ಗೌರವದಿಂದ ಕಾಣಿರಿ: ಓಂಕಾರ ಸ್ವಾಮೀಜಿ

| Published : Feb 13 2024, 12:50 AM IST

ಸಾರಾಂಶ

ಹಿಂದೆ ರಾಗ, ದ್ವೇಷ, ಅಸೂಯೆಗಳು ದೂರವಾಗಿದ್ದವು ಅದರಲ್ಲಿ ಮಠ, ದೇವಾಲಯಗಳ ಪಾತ್ರ ಪ್ರಮುಖವಾಗಿದ್ದವು. ಪ್ರಸ್ತುತ ದುರಾಚಾರ, ದ್ವೇಷ, ಅಶಾಂತಿ, ಕೊಲೆ, ಸುಲಿಗೆ, ವಾಮಮಾರ್ಗ, ದುರ್ವಿಚಾರಗಳು ಸಮಾಜದಲ್ಲಿ ತಾಂಡವವಾಡುತ್ತಿದ್ದು, ಸ್ವಾರ್ಥ ಹೆಚ್ಚಾಗಿದೆ, ನೆಮ್ಮದಿಯಿಲ್ಲದಾಗಿದೆ, ದುಡಿದ ಹಣವೆಲ್ಲಾ ನ್ಯಾಯಾಲಯ, ವಕೀಲರಿಗೆ ಹಾಕುವುದಾಗಿದೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ವಿದ್ಯಾವಂತರು ಹೆಚ್ಚಾಗಿ ಜಾತಿ ಹುಚ್ಚಾಟದಿಂದ ಬೀದಿಗೊಂದು ದೇವಾಲಯ ನಿರ್ಮಿಸಿ ಸಮಾಜವು ಛಿದ್ರಗೊಂಡಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಸಂಕ್ಲೀಪುರ ಗ್ರಾಮದಲ್ಲಿ ಪುರವರ್ಗ ಮಠದ ದೊಡ್ಡ ವೀರೇಶ್ವರ ಸ್ವಾಮೀಜಿ ೭೦ನೇ ಪುಣ್ಯ ಸಂಸ್ಮರಣೋತ್ಸವ, ಶಿವದೀಕ್ಷೆ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಅನಾದಿ ಕಾಲದಿಂದಲೂ ಮಠ, ಮಂದಿರಗಳು, ಮಾನವನ ಬದುಕು ನಂದನವನವನ್ನಾಗಿ ರೂಪಿಸಿವೆ. ತಂದೆ, ತಾಯಿ, ಗುರು ಮತ್ತು ಭೂಮಿಯ ಗೌರವದಿಂದ ಕಾಣುವರೋ ಅವರಿಗೆ ಮಾತ್ರ ಮುಕ್ತಿ ದೊರಕಲಿದೆ ಎಂದರು.

ಹಿಂದೆ ರಾಗ, ದ್ವೇಷ, ಅಸೂಯೆಗಳು ದೂರವಾಗಿದ್ದವು ಅದರಲ್ಲಿ ಮಠ, ದೇವಾಲಯಗಳ ಪಾತ್ರ ಪ್ರಮುಖವಾಗಿದ್ದವು. ಪ್ರಸ್ತುತ ದುರಾಚಾರ, ದ್ವೇಷ, ಅಶಾಂತಿ, ಕೊಲೆ, ಸುಲಿಗೆ, ವಾಮಮಾರ್ಗ, ದುರ್ವಿಚಾರಗಳು ಸಮಾಜದಲ್ಲಿ ತಾಂಡವವಾಡುತ್ತಿದ್ದು, ಸ್ವಾರ್ಥ ಹೆಚ್ಚಾಗಿದೆ, ನೆಮ್ಮದಿಯಿಲ್ಲದಾಗಿದೆ, ದುಡಿದ ಹಣವೆಲ್ಲಾ ನ್ಯಾಯಾಲಯ, ವಕೀಲರಿಗೆ ಹಾಕುವುದಾಗಿದೆ ಎಂದರು.

ರಾಮಘಟ್ಟ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಲ್ಲನಾಯ್ಕನಹಳ್ಳಿ, ಬನ್ನಿಕೋಡು, ಕೆಂಗಲಹಳ್ಳಿ ಗ್ರಾಮದಲ್ಲಿ ಪುರವರ್ಗ ಮಠದ ನಿವೇಶನ ಇದೆ. ಪ್ರತಿ ವರ್ಷ ಮಾಘ ಮಾಸದ ಸಂಕ್ಲೀಪುರ ಗ್ರಾಮದಲ್ಲಿ ಧಾರ್ಮಿಕ ಸಭೆ, ಸಾಮೂಹಿಕ ವಿವಾಹ ನೆರವೇರಲಿದೆ. ಸಂಕ್ಲೀಪುರ ಗ್ರಾಮದ ದೊಡ್ಡವೀರೇಶ್ವರ ಸ್ವಾಮೀಜಿ ಹೆಸರಿನ ಸಮುದಾಯ ಭವನಕ್ಕೆ ಮಠದಿಂದ ಒಂದು ಲಕ್ಷ ರುಪಾಯಿ ನೀಡುವುದಾಗಿ ಭರವಸೆ ನೀಡಿದರು.

ರಾತ್ರಿ ಗಂಗಾ ಪೂಜೆ, ಸ್ವಸ್ತಿ ವಾಚನ, ನಾಂದಿ, ಸಮಾರಾಧನೆಯ ಪೂಜೆ, ರಾಮಘಟ್ಟ ಮೂಲ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಗಣಹೋಮ, ಶಿವಧೀಕ್ಷೆ, ಗುರುಗಳ ಪಾದುಕೆ ಬೆತ್ತ ಇರುವ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮದ ಮುಖಂಡರಾದ ಸದಾಶಿವಯ್ಯ, ಚಿಂದಿಗೌಡ್ರ ನಿಂಗಪ್ಪ, ಗೌಡ್ರನಿಂಗಪ್ಪ, ವಿರೂಪಾಕ್ಷಯ್ಯ, ಚನ್ನಬಸಪ್ಪ, ನಿಂಗನಗೌಡ, ಹನುಮಂತಪ್ಪ, ಗ್ರಾ.ಪಂ ಸದಸ್ಯರಾದ ಅನುಷಾ, ಕಾಂತಮ್ಮ, ಸೋಮಶೇಖರಪ್ಪ ಹಾಗೂ ಭಕ್ತರು, ಗ್ರಾಮಸ್ಥರಿದ್ದರು.