ಸಾರಾಂಶ
ಬಳ್ಳಾರಿ: ವಿಶ್ವದ ಎಲ್ಲ ದೇಶಗಳ ಸಂವಿಧಾನಗಳ ಪೈಕಿ ಭಾರತದ ಸಂವಿಧಾನವು ಶ್ರೇಷ್ಠವಾದದ್ದು. ವಿವಿಧತೆ ಮತ್ತು ಸಾಂಸ್ಕೃತಿಕ ವೈಭವ ಹೊಂದಿರುವ ದೇಶದಲ್ಲಿ ಎಲ್ಲವೂ ಸಂವಿಧಾನದ ಮೇಲೆ ಅವಲಂಬಿತವಾಗಿದೆ ಎಂದು ಮೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಬಿ.ಸರೋಜಾ ತಿಳಿಸಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಮತ್ತು ಸಂವಿಧಾನ ಓದು ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.ಸಂವಿಧಾನಕ್ಕೆ ನೀಡುವ ಗೌರವವು ನನಗೆ ನೀಡುವ ಗೌರವ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು. ಸೇವೆಯಲ್ಲಿ ಶಿಸ್ತು, ದೇಶ ಮೊದಲು ಎಂದು ಗೌರವ ನೀಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್ ಎಸ್.ಎನ್ ಮಾತನಾಡಿ, ಸಂವಿಧಾನದ ಇತಿಹಾಸವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾರ್ವಭೌಮತ್ವ ಎಂಬುದು ನಮ್ಮ ದೇಶದ ಆಸ್ತಿಯಾಗಿದ್ದು, ಸಮಾಜವಾದ, ಜಾತ್ಯಾತೀತತೆ, ಪ್ರಜಾಸತ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯ , ಏಕತೆ, ಸಮಗ್ರತೆ ಎಂಬುದು ಸಂವಿಧಾನದ ಮೂಲ ಧ್ಯೇಯವಾಗಿವೆ ಎಂದರು. ಸಂವಿಧಾನ ವಿರೋಧಿಸುವ ಮೂಢರಿಗೆ ಇವುಗಳ ಕುರಿತು ಜ್ಞಾನ ನೀಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಘಟಕದ ಸಂಯೋಜಕರಾದ ಡಾ. ಕುಮಾರ್ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕರಾದ ಡಾ.ಗೌರಿ ಮಾನಸ ವೇದಿಕೆಯಲ್ಲಿದ್ದರು.ಕಾರ್ಯಕ್ರಮದ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ವೀರಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಇತಿಹಾಸ ವಿಭಾಗದ ಸಂತೋಷ್ ಕುಮಾರ್ ವಂದಿಸಿದರು.
ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಜರುಗಿದ ದಿನಾಚರಣೆ ಸಮಾರಂಭದಲ್ಲಿ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.