ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ವಕೀಲರು ಕಕ್ಷಿದಾರರ ಹಿತ ಬಯಸಬೇಕಿದ್ದು, ತ್ವರಿತಗತಿಯಲ್ಲಿ ನ್ಯಾಯ ಪ್ರಕರಣ ಇತ್ಯರ್ಥಗೊಳಿಸಿದಾಗ ಮಾತ್ರ ನ್ಯಾಯಾಲಯಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ರಾಜ್ಯದಲ್ಲಿ ಕಾನೂನು ಬಿಗಿಗೊಳಿಸುವ ಪ್ರಯತ್ನದ ಜತೆಗೆ ತ್ವರಿತ ನ್ಯಾಯ ದೊರಕಿಸುವ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ನ್ಯಾಯಾಲಯದ ಕಟ್ಟಡ, ಲಾ ಚೇಂಬರ್ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿಗಳನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 66 ಸಾವಿರ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ. ಯಾಕೇ ಹೀಗೆ ಇಷ್ಟು ಪ್ರಕರಣಗಳು ಉಳಿದವು ಎಂಬ ಬಗ್ಗೆ ಅವಲೋಕನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆಗೆ ಮೂಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದರು.ಹೈ ಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ ಮಾತನಾಡಿ, ದೇಶದ ಸ್ವಾತಂತ್ರ್ಯಾಕ್ಕಾಗಿ ಮಹಾತ್ಮಾ ಗಾಂಧೀಜಿ ವಕೀಲ ವೃತ್ತಿಯನ್ನೇ ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ.
ಮುದ್ದೇಬಿಹಾಳ ತಾಲೂಕಿನಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಿರುವ ಕಾರಣ ಜಿಲ್ಲಾ ಕೇಂದ್ರಕ್ಕೆ ಕಕ್ಷಿದಾರರು, ರೈತರು ನ್ಯಾಯಾಲಯಕ್ಕೆ ಹೋಗಿ ಬರಲು ಕಷ್ಟಪಡುತ್ತಿದ್ದರು. ಇದನ್ನು ಗಮನಿಸಿ ಇಲ್ಲಿ ಜಿಲ್ಲಾ ನ್ಯಾಯಾಲಯದ ಅತ್ಯಂತ ಅವಶ್ಯಕವಿದೆ ಎಂಬುದನ್ನು ಅರಿತು ನ್ಯಾಯವಾದಿಗಳ ಸಂಘ ಮನವಿ ಸಲ್ಲಿಸಿತ್ತು. ಇದಕ್ಕೆ ಸರ್ಕಾರವೂ ಕೂಡ ತಕ್ಷಣವೇ ಸ್ಪಂದಿಸಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಮಂಜುರಾತಿ ನೀಡಿದ್ದು, ಕಕ್ಷಿದಾರರಿಗೆ ಅನುಕೂಲವಾದಂತಾಗಿದೆ. ವಕೀಲರು ಕಕ್ಷಿದಾರರ ಮನೋಸ್ಥಿತಿ ಅರ್ಥೈಸಿಕೊಂಡು ಮಾನವೀಯ ಮೌಲ್ಯಗಳಡಿಯಲ್ಲಿ ನ್ಯಾಯ ಒದಗಿಸಿಕೊಟ್ಟಾಗ ಜಿಲ್ಲಾ ನ್ಯಾಯಾಲಯ ಸ್ಥಾಪಿಸಿದ್ದಕ್ಕೆ ಸಾರ್ಥಕವಾಗುತ್ತದೆ. ನ್ಯಾಯಾಂಗ ಇಲಾಖೆಯ ಮೇಲೆ ಜನರಿಗೆ ಒಳ್ಳೆಯ ನಂಬಿಕೆ, ವಿಸ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ವಕೀಲರು ಅರಿತು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ ಮುದ್ದೇಬಿಹಾಳ ತಾಲೂಕಿನಲ್ಲಿ ಜಿಲ್ಲಾ ನ್ಯಾಯಾಲಯದ ಅವಶ್ಯವಾಗಿತ್ತು. ತಾಲೂಕಿನ ಎಲ್ಲ ವಕೀಲರ ಹಾಗೂ ಜನರಒತ್ತಾಯದ ಮೇರೆಗೆ ಇಂದು ಜಿಲ್ಲಾ ನ್ಯಾಯಾಲಯಕ್ಕೆ ನಮ್ಮ ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ. ಸಚಿವ ಎಚ್.ಕೆ.ಪಾಟೀಲರಿಗೆ ಹಾಗೂ ಹೈ ಕೋರ್ಟ್ ನ್ಯಾಯಮೂರ್ತಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಳ್ಲಿ ನ್ಯಾಯಾಲಯದಲ್ಲಿ ಮೂಲ ಸೌಲಭ್ಯ ಮತ್ತು ವಿಶೇಷ ಗ್ರಂಥಾಲಯ ವ್ಯವಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ವಿಜಯಪುರ ಜಿಲ್ಲಾ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಎಂ.ಅರುಣ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್. ಮಾಲಗತ್ತಿ, ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ಎಂ.ಆರ್.ಪಾಟೀಲ, ಎಂ.ಬಿ.ಮುದ್ನಾಳ, ಬಿ.ಎ.ನಾಡಗೌಡರ, ಪಿ.ಎ.ಹಿರೇಮಠ, ಎಸ್.ಎಸ್.ಹೂಗಾರ, ಎಸ್.ಎಂ.ಚಿಲ್ಲಾಳಶೆಟ್ಟೆರ, ಎಂ.ಎ.ಮುದ್ದೇಬಿಹಾಳ ಸೇರಿ ಎಲ್ಲ ನ್ಯಾಯಾಧೀಶರು ಮತ್ತು ಸಿಬ್ಬಂದಿ ಇದ್ದರು. ಎನ್.ಆರ್.ಮೋಕಾಶಿ ನಿರೂಪಿಸಿದರು.ಕೋಟ್
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ ಎಂಬ ಮಾತು ಶುದ್ಧ ಸುಳ್ಳು. ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸುವ ಸಲುವಾಗಿ ನ್ಯಾಯಾಂಗ ಇಲಾಖೆಯಲ್ಲಿನ ಸುಮಾರು 2200 ಹುದ್ದೆಗಳನ್ನು ಮತ್ತು 115 ಹೊಸ ನ್ಯಾಯಾಲಯಗಳಿಗೆ ಮಂಜುರಾತಿ ನೀಡುವ ಮೂಲಕ ಉತ್ತಮ ಆಡಳಿತ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ದೇಶದಲ್ಲಿಯೇ ಕರ್ನಾಟಕದ ನ್ಯಾಯಾಲಯ ವ್ಯವಸ್ಥೆಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಎಚ್.ಕೆ.ಪಾಟೀಲ, ಕಾನೂನು ಸಚಿವ