ರಾಷ್ಟ್ರಕೂಟರ ಕಾಲದ ಶ್ರೀವಿಜಯನು ಕವಿರಾಜ ಮಾರ್ಗ ಕಾವ್ಯ ರಚಿಸಿ ಇಡೀ ಕರ್ನಾಟಕದಲ್ಲಿಯೇ ವಿಶಿಷ್ಟ ಸೌಂದರ್ಯದ ಭಾಷೆ ಬಳಕೆ ಮಾಡುವವರಲ್ಲಿ ಕೊಪಣಿಗರು ಪ್ರಮುಖರು ಎಂದು ಸಾರಿದರು
ಕಾರಟಗಿ: ಕಸವರಮೆಂಬುದು ನೆರೆ ಸೈ | ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ |
ಕಸವೇಂ ಕಸವರಮೇನು | ಬ್ಬಸಮಂ ಬಸಮಲ್ಲದಿರ್ದು ಮಾಡುವವೆಲ್ಲಂ ||ಪರರ ವಿಚಾರ, ಧರ್ಮ ಗೌರವಿಸುವುದು ಬಂಗಾರಕ್ಕೆ ಸಮಾನ ಎಂದು ಕಾರಟಗಿ ತಾಲೂಕಿನ 3ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ. ಡಾ. ಸಿ.ಬಿ.ಚಿಲ್ಕರಾಗಿ ಹೇಳಿದರು.
ಕಾರಟಗಿ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು.ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ಯಾಂತ್ರಿಕ ಬುದ್ಧಿಮತ್ತೆ ಎಐ ಮತ್ತು ಚಿಪ್ ಆಧಾರಿತ ಕಲಿಕೆ ಪ್ರಮುಖ ಪಾತ್ರ ವಹಿಸಿದ್ದರಿಂದ ನಮ್ಮ ದೇಶದ ಬಗ್ಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಮಾಪನ ಗಾಬರಿ ಹುಟ್ಟಿಸುವಷ್ಟು ಕುಸಿದು ಹೋಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ಐತಿಹಾಸಿಕ ಕುರುಹು, ಧರ್ಮ, ಸಾಂಪ್ರದಾಯಿಕ ವ್ಯವಸಾಯ ನೀರಾವರಿ ಶಿಕ್ಷಣ ಸಾರಿಗೆ ಆರೋಗ್ಯ ಅಭಿವೃದ್ಧಿ ಕುರಿತು ಹಲವು ಒಳನೋಟಗಳನ್ನು ನೀಡಿ ಆಧುನಿಕ ಎಐ ತಂತ್ರಜ್ಞಾನದಲ್ಲಿ ಭವಿಷ್ಯದ ಶಿಕ್ಷಣ ನೈತಿಕತೆಯ ಸವಾಲು ತೆರೆದಿಟ್ಟರು. ಇಂಗ್ಲಿಷ್ ಒಂದು ದೆವ್ವದಂತೆ ನಮಗೆ ಬಡಿದುಕೊಂಡಿದೆ. ಅದು ನಮ್ಮದೆಲ್ಲವನ್ನೂ ನಾಶ ಮಾಡಿ ನಮ್ಮನ್ನು ದ್ವಂಸ ಮಾಡುವವರಿಗೆ ನಮ್ಮನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.ರಾಷ್ಟ್ರಕೂಟರ ಕಾಲದ ಶ್ರೀವಿಜಯನು ಕವಿರಾಜ ಮಾರ್ಗ ಕಾವ್ಯ ರಚಿಸಿ ಇಡೀ ಕರ್ನಾಟಕದಲ್ಲಿಯೇ ವಿಶಿಷ್ಟ ಸೌಂದರ್ಯದ ಭಾಷೆ ಬಳಕೆ ಮಾಡುವವರಲ್ಲಿ ಕೊಪಣಿಗರು ಪ್ರಮುಖರು ಎಂದು ಸಾರಿದರು
ಕಿಸುವೊಳಲು, ಮಹಾಕೊಪಣ, ಪುಲಿಗೆರೆ ಒಕ್ಕುಂದಗಳ ನಡುವಣ ಪ್ರದೇಶವು ತಿರುಳ್ಗನ್ನಡದ ನಾಡು ಎಂದಿದ್ದಾನೆ. ಅದರಲ್ಲಿ ಪ್ರಸಿದ್ಧವಾಗಿದ್ದ ಮಹಾಕೊಪಣವೇ ಇಂದಿನ ಕೊಪ್ಪಳ ಪ್ರದೇಶವಾಗಿದೆ. ಒಂಬತ್ತನೆಯ ಶತಮಾನದ ವೇಳೆಗೆ ಪ್ರಖ್ಯಾತಿ ಪಡೆದ ಈ ನಾಡಿಗೆ ಒಳಪಟ್ಟಿದ್ದೆ ಇಂದಿನ ಕಾರಟಗಿ. ಪ್ರಸ್ತುತ ಕರ್ನಾಟಕವು ನಮ್ಮ ದೇಶದ ಇತರೆ ರಾಜ್ಯಗಳು ಅನುಭವಿಸುವ ಆಧುನಿಕ, ನಗರೀಕರಣದ, ಜಾಗತೀಕರಣದ ಸಂಕಟ ಅನುಭವಿಸುತ್ತಿದೆ. ನಮ್ಮ ಜಿಲ್ಲೆ ಮತ್ತು ಈ ಕಾರಟಗಿ ತಾಲೂಕು ಹೊರತಾಗಿಲ್ಲ ಮಕ್ಕಳಿಗೆ ಶಿಕ್ಷಣ ತಾಯ್ನುಡಿಯಲ್ಲಿಯೇ ಕಲಿಸಬೇಕೆಂಬುದಾಗಿದೆ. ಆದರೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಸಂಸ್ಥೆಗಳು ನಮ್ಮ ದೇಶದಲ್ಲಿ,ಇಂಗ್ಲಿಷನಲ್ಲಿ ಕಲಿತರೆ ಹೆಚ್ಚು ಬುದ್ಧಿವಂತರಾಗುತ್ತಾರೆ ಎಂಬ ಸುಳ್ಳು ವದಂತಿ ಹಬ್ಬಿಸುತ್ತಿವೆ ಎಂದರು.ಕನ್ನಡ ಭಾಷೆ-ಸಾಹಿತ್ಯವು ಭಾರತೀಯತೆಗೆ ಬಹುದೊಡ್ಡ ಪರಂಪರೆ ನೀಡಿದೆ. ಹಲವಾರು ಭಾಷೆ, ವಿಭಿನ್ನ ಸಂಸ್ಕೃತಿ, ಹತ್ತಾರು ಮತ ಧರ್ಮಗಳಲ್ಲಿ, ಕನ್ನಡತನ ಕನ್ನಡ ಸಂಸ್ಕೃತಿ ಕನ್ನಡ ಮನಸ್ಸು ಗುರುತಿಸಿಕೊಂಡಿವೆ. ಮತ್ತು ಭಿನ್ನತೆ ತನ್ನೊಳಗೆ ಜೀರ್ಣಿಸಿಕೊಂಡು ತನ್ನದೇ ತೇಜಸ್ಸನ್ನು ಮೆರೆಯುತ್ತಾ ಬಂದಿದೆ. ಪಂಪ, ರನ್ನ,ಪೊನ್ನ ವಚನಕಾರರು ಜನ್ನ ಹರಿಹರ ರಾಘವಾಂಕ ಚಾಮರಸ ಕುಮಾರವ್ಯಾಸ ಲಕ್ಷೀಶ ಕನಕ ಪುರಂದರಾದಿ ದಾಸವರೇಣ್ಯರು, ನಿಜಗುಣರಾದಿ ತತ್ವಪದಕಾರರು ಇವರೆಲ್ಲರ ಸಾಹಿತ್ಯ ಬರೀ ಸಾಹಿತ್ಯವೆನಿಸದೆ, ಬದುಕಿನ ಜ್ಞಾನಕೋಶಗಳೇ ಆಗಿವೆ. ಆಧುನಿಕ ಸಾಹಿತಿಗಳಾದ ಕುವೆಂಪು ಮಾಸ್ತಿ ಬೇಂದ್ರೆ ಕಾರಂತ ಪುತಿನ ಚದುರಂಗ ಜಿಎಸ್ ಶಿವರುದ್ರಪ್ಪ ಅನಂತಮೂರ್ತಿ ತೇಜಸ್ವಿ ಭೈರಪ್ಪ ಲಂಕೇಶ್ ಕೃಷ್ಣ ಆಲನಹಳ್ಳಿ ಡಿಆರ್ ನಾಗರಾಜ ದೇವನೂರ ಮಹಾದೇವ ನಟರಾಜ ಬೂದಾಳ ಕಾತ ಚಿಕ್ಕಣ್ಣ ಅವರ ಸಾಹಿತ್ಯದವರೆಗೂ ವಿಸ್ತರಿಸಿ, ಈಗಲೂ ಬರೆಯುವ ಯುವ ಬರಹಗಾರರೂ ಮುಂದುವರಿಸಿದ್ದಾರೆ. ಅದರ ಈಗಿನ ಸಾಹಿತ್ಯ ಕೃತಿಗಳ ಗುಣಮಟ್ಟ ಕುರಿತು ಲೇಖಕರು ಆತ್ಮವಲೋಕನ ಮಾಡಿಕೊಳ್ಳಬೇಕಿದೆ .
ಕಾರಟಗಿ ತಾಲೂಕು ಶೈವ ಮತ್ತು ವೈಷ್ಣವ ಮತಗಳು ಹಾಗೂ ಸಮಾಜದ ಸರ್ವ ಸಮುದಾಯಗಳ ಸೌಹಾರ್ದ ಕೇಂದ್ರವಾದ ಬಗ್ಗೆ ದಾಖಲೆಗಳು ದೊರೆಯುತ್ತವೆ. ಇತಿಹಾಸದಲ್ಲಿ ನಾವು ಭವ್ಯವಾಗಿದ್ದೆವು, ದಿವ್ಯವಾಗಿದ್ದೆವು, ಧೀರರಾಗಿದ್ದೆವು, ಶೂರರಾಗಿದ್ದೆವು ಎಂದು ಅದನ್ನೆ ಹೇಳುತ್ತಾ ಕುಳಿತುಕೊಂಡರೆ ಈ ದಿನ ಅದನ್ನು ಕೇಳುವ ಪುರಸೊತ್ತು ಯಾರಿಗೂ ಇಲ್ಲ. ಹೈದರಾಬಾದ್ ಕನ್ನಡಿಗರ ಬಹುದಿನದ ಬೇಡಿಕೆ ೩೭೧ (ಜೆ) ಕಲಂ ತಿದ್ದುಪಡಿಯನ್ವಯ ವಿಶೇಷ ಸೌಲಭ್ಯ ಹಾಗೂ ಮೀಸಲಾತಿ ಒದಗಿಸಲಾಗಿದ್ದರೂ, ಈವರೆಗೂ ಅದರ ಅನುಷ್ಠಾನವು ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾತೃಭಾಷೆಯಾಗಿರದ ಭಾಷೆಯೊಂದನ್ನು ಶಿಕ್ಷಣದ ಕೊಡುಕೊಳ್ಳುವಿಕೆಯ ಬಳಕೆಗೆ ಹೇರಿದಾಗ ಭಾರತದ ಜ್ಞಾನೋತ್ಪಾದನೆಗೆ ತೀವ್ರ ಧಕ್ಕೆ ಉಂಟಾಗಿದ್ದನ್ನು ಹಿಂದಿನಿಂದ ಇಂದಿನವರೆಗೂ ಮುಂದುವರಿಯುತ್ತಿರುವ ಜಾತಿ ತಾರತಮ್ಯ, ವಸಾಹತು ಶಾಹಿ ಸಾಂಸ್ಕೃತಿಕ ಯಜಮಾನಿಕೆ ಮತ್ತು ಪಶ್ಚಿಮದ ದಾಹಿಮನೋಸ್ಥಿತಿಯ ಸಾಮ್ರಾಜ್ಯಶಾಹಿ ಧೋರಣೆಗಳು, ಭಾರತದಲ್ಲಿಯ ಜ್ಞಾನ ದಿವಾಳಿಯಂಚಿಗೆ ತಂದು ನಿಲ್ಲಿಸಿದ್ದನ್ನು ದಾಖಲೆಗಳು ತೋರಿಸುತ್ತಿವೆ.ಯಾಂತ್ರಿಕ ಬುದ್ಧಿಮತ್ತೆ (ಎಐ) ಮತ್ತು ಚಿಪ್ ಕಲಿಕೆಗಳು ಪ್ರಮುಖ ಪಾತ್ರವಹಿಸಿದ್ದರಿಂದ ನಮ್ಮ ದೇಶದ ಬಗ್ಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಮಾಪನಗಳು ಗಾಬರಿ ಹುಟ್ಟಿಸುವಷ್ಟು ಕುಸಿದು ಹೋಗಿವೆ ಎಂದರು.