ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ: ಜಿಪಂ ಸಿಇಒ ಕೆ.ಆರ್.ನಂದಿನಿ

| Published : Sep 05 2025, 01:00 AM IST

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ: ಜಿಪಂ ಸಿಇಒ ಕೆ.ಆರ್.ನಂದಿನಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಕಿಕ್ಕೇರಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಅಭಿಮಾನಿಯಾಗಿರುವೆ. ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನ ತ್ವರಿತವಾಗಿ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ವ್ಯವಸ್ಥೆ ಮಾಡಲು ತಾಪಂ ಇಒ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಾರ್ವಜನಿಕರು ಜಿಲ್ಲೆ, ತಾಲೂಕು ಕಚೇರಿಗಳಿಗೆ ಅನಗತ್ಯವಾಗಿ ಅಲೆಯುವುದನ್ನು ತಪ್ಪಿಸಲು ಹೋಬಳಿ ಮಟ್ಟದ ಕುಂದುಕೊರತೆ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.ಪಟ್ಟಣದ ಕೆ.ಎಸ್. ನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಪ್ರತಿ ಸೋಮವಾರ ಗ್ರಾಪಂನಿಂದ ಜಿಪಂ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸಲು ಮುಂದಾಗಬೇಕು ಎಂದರು.

ನನ್ನ ಅವಧಿಯಲ್ಲಿ ನೊಂದವರ, ದುರ್ಬಲರ ಸಮಸ್ಯೆಗೆ ಮೊದಲ ಆದ್ಯತೆ ನೀಡುತ್ತೇನೆ. ಇಂದಿನ ಸಭೆಯಲ್ಲಿ 24 ಅರ್ಜಿಗಳು ಬಂದಿದ್ದು, ಒಂದು ವಾರದೊಳಗೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸಬೇಕು ಎಂದು ಸೂಚಿಸಿದರು.

ನಾನು ಕಿಕ್ಕೇರಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಅಭಿಮಾನಿಯಾಗಿರುವೆ. ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನ ತ್ವರಿತವಾಗಿ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ವ್ಯವಸ್ಥೆ ಮಾಡಲು ತಾಪಂ ಇಒ ಕ್ರಮ ವಹಿಸಬೇಕು ಎಂದರು.

ಕಿಕ್ಕೇರಿಯಲ್ಲಿ ರಾಜ್ಯ ಹೆದ್ದಾರಿ ಬಳಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಕಾಡುವ ಜೊತೆಗೆ ನಾಯಿಗಳ ಕಾಟ ವಿಪರೀತವಾಗಿದೆ. ಗೂಬೆಗುಡ್ಡದ ಬಳಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕರು ದೂರಿದರು.

ಸಾರ್ವಜನಿಕ ಸ್ಮಶಾನ ವ್ಯವಸ್ಥೆ, ಮಿನಿ ವಿಧಾನಸೌಧ, ಉದ್ಯಾನವನ, ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ವ್ಯವಸ್ಥೆ ಮಾಡಿಕೊಡಬೇಕು.ರಸ್ತೆಗಳಲ್ಲಿ ಬೀದಿ ದೀಪ ಇಲ್ಲವಾಗಿದೆ. ಪೌರಕಾರ್ಮಿಕರು ಸ.ನಂ. 3ರಲ್ಲಿ ಮನೆ ನಿರ್ಮಿಸಿಕೊಂಡಿದ್ದು ಹಕ್ಕು ಪತ್ರ ನೀಡಬೇಕು. ಲಕ್ಷ್ಮೀಪುರ ಗ್ರಾಮಕ್ಕೆ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಿಸುವಂತೆ ಅಹವಾಲು ಸಲ್ಲಿಸಿದರು.

ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ನೀಡಬೇಕು. ಮನೆ ಹಂಚಿಕೆಯಾಗಿದೆ. ಆದರೆ, ಹಕ್ಕುಪತ್ರ ನೀಡಿಲ್ಲ. ಕೊಟ್ಟಿಗೆ ಹಾಗೂ ಶೌಚಾಲಯ ನಿರ್ಮಿಸಿಕೊಂಡಿದ್ದು, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಐಕನಹಳ್ಳಿಯಲ್ಲಿ ರಸ್ತೆಯ ಡ್ರೈನ್‌ಗಳ ತೆರದಿವೆ. ಮುಚ್ಚಿಸಿ, ಊಗಿನಹಳ್ಳಿ ಗ್ರಾಮದಲ್ಲಿ ಗಿಡ ನೆಡದೆ ನರೇಗಾ ಯೋಜನೆಯಲ್ಲಿ ಬಿಲ್ ಮಾಡಿಕೊಳ್ಳಲಾಗಿದೆ ಎಂದು ದೂರುಗಳ ಸರಮಾಲೆಯನ್ನು ಸಾರ್ವಜನಿಕರು ಅಲವತ್ತುಕೊಂಡರು.

ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಅನಿತಾ, ತಾಪಂ ಇಒ ಸುಷ್ಮಾ, ಹೋಬಳಿಯ 7 ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ, ಪಂಚಾಯಿತಿ ಅಧಿಕಾರಿಗಳು ಇದ್ದರು.