ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಜಿಲ್ಲೆಯ ವಿವಿಧೆಡೆಯಿಂದ 28 ಪಶುವೈದ್ಯ ಕೇಂದ್ರ ಸ್ಥಳಾಂತರ ಮಾಡುವ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಹೈಕೋರ್ಟ್, ಪಶು ವೈದ್ಯಕೀಯ ಕೇಂದ್ರಗಳನ್ನು ಕೂಡಲೇ ಕಾರ್ಯ ನಿರ್ವಹಣೆ ಮಾಡಬೇಕು ಮತ್ತು ಅವುಗಳಿಗೆ ಸಿಬ್ಬಂದಿ ಹಾಗೂ ವೈದ್ಯರನ್ನು ಮರು ನಿಯೋಜನೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ 28 ಪಶುವೈದ್ಯ ಕೇಂದ್ರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಸರ್ಕಾರ ಮತ್ತು ಬಿಬಿಎಂಪಿ ಮುಂದಾಗಿರುವುದನ್ನು ಪ್ರಶ್ನಿಸಿ ಅನಿಮಲ್ ರೈಟ್ಸ್ ಫಂಡ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಈ ನಿರ್ದೇಶನ ನೀಡಿದೆ.
ನಗರದಲ್ಲಿ ಪ್ರತಿ ನಿತ್ಯ 600-700 ಸಾಕು ಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ. ಅವುಗಳಿಗೆ ಅಗತ್ಯವಾಗಿ ಚಿಕಿತ್ಸೆ ನೀಡಬೇಕು. ಹೀಗಿರುವಾಗ ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬರಲಿದೆ. ಇದರಿಂದ ಸಾಮಾನ್ಯ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತದೆ ಎಂದು ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದ ಪರಿಗಣಿಸಿದ ನ್ಯಾಯಪೀಠ ಈ ಆದೇಶ ಮಾಡಿದೆ.ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಕೇಂದ್ರಗಳ ಪ್ರಾರಂಭಕ್ಕೆ ನಿರ್ಧರಿಸಿದ್ದು, 2022ರ ಮೇ 17ರಂದು ಆದೇಶ ಹೊರಡಿಸಿದೆ. ಮೊದಲ ಹಂತದ ಭಾಗವಾಗಿ 20 ಪಶು ವೈದ್ಯಕೀಯ ಕೇಂದ್ರಗಳನ್ನು ಪ್ರಾರಂಭಿಸಿದೆ. ಈ ಆದೇಶ ಜಾರಿ ಮಾಡುವುದಕ್ಕೂ ಮುನ್ನ ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರಕ್ಕೆ ಮುಂದಾಗಿರುವ ನಿರ್ಧಾರದಿಂದ ಸ್ಥಳೀಯ ರೈತರು ತಮ್ಮ ಪಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಸ್ಥಿತಿ ಬರುತ್ತದೆ. ಈ ಕಾರಣಕ್ಕಾಗಿ ಪಶು ಚಿಕಿತ್ಸಾಲಯ ಸ್ಥಳಾಂತರ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.