ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ಜೀರ್ಣೋದ್ಧಾರಗೊಂಡು ಇದೀಗ ಉದ್ಘಾಟನೆಯಾಗುತ್ತಿರುವ ಕರಿಯಮ್ಮ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಬೆಳಗ್ಗೆ ೬ ಗಂಟೆಯಿಂದ ಉಷಾಪೂಜೆ, ಮಹಾಗಣಪತಿ ಹೋಮ, ಸ್ಥಾನಶುದ್ದಿ, ಬಿಂಬಶುದ್ಧಿ ಕಲಶಪೂಜೆ, ಶ್ರೀಸೂಕ್ತ ಹೋಮ, ಅನುಜ್ಞಾನಕಲಶ ಪೂಜೆ, ಪ್ರಸಾದ ಹೋಮ, ಆಂಜನೇಯ ಹೋಮ, ರತ್ನಾನ್ಯಾಸ, ಪೀಠಾಧಿಗಳ ಪ್ರತಿಷ್ಠೆ, ಕಾರ್ಯಕ್ರಮದೊಂದಿಗೆ ಅಷ್ಟಬಂಧನ ಪೂಜೆ ದುರ್ಗ ಹೋಮ ನಡೆಸಲಾಯಿತು ಎಂದು ಕೇಶವಭಟ್ಟರು ತಿಳಿಸಿದರು.ಹಳೇಬೀಡು ಗ್ರಾಪಂ ಕೊಡುಗೆ:
೨೦೧೬ರಿಂದ ಗ್ರಾಮ ಪಂಚಾಯಿತಿಯ ಸಹಕಾರದಿಂದ ಪ್ರಾರಂಭವಾದ ನೂತನ ದೇವಾಲಯದ ಜೀರ್ಣೋದ್ಧಾರ ಕಾರ್ಯ ೨೦೨೫ರಲ್ಲಿ ಮುಕ್ತಾಯವಾಗಿದ್ದು, ೨೦೧೬ರಿಂದಲೂ ಗ್ರಾಮ ಪಂಚಾಯಿತಿ ಅಂದಿನಿಂದ ಇಂದಿನವರೆಗೂ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಸುಮಾರು ೧ ಕೋಟಿಗೂ ಅಧಿಕ ಹಣವನ್ನು ದೇವಾಲಯದ ನಿರ್ಮಾಣದ ಕಾರ್ಯಕ್ಕೆ ನೀಡಿರುವುದು ಗ್ರಾಮಪಂಚಾಯಿತಿಯ ಕೊಡುಗೆ ಅವಿಸ್ಮರಣೀಯವಾದುದ್ದು, ಇನ್ನುಳಿದಂತೆ ಭಕ್ತರ ಸಹಕಾರದಿಂದ ೨ .೭೫ ಕೋಟಿ ಸೇರಿ ಒಟ್ಟು ೩.೭೫ ಕೋಟಿ ದೇವಾಲಯದ ನಿರ್ಮಾಣಕ್ಕೆ ಹರಿದುಬಂದಿದೆ.ವಿಶ್ವ ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯ ತವರೂರಲ್ಲಿಯೇ ಗ್ರಾಮದೇವತೆಯ ನೂತನ ದೇವಾಲಯ ನಿರ್ಮಾಣ ಆಧುನಿಕ ಮತ್ತು ಹೊಯ್ಸಳರ ಶೈಲಿಯ ಸಮ್ಮಿಶ್ರಣದಲ್ಲಿ ಶಿಲ್ಪಿಗಳಾದ ಶ್ರೀ ಮಾಸ್ತಪ್ಪ ಮಂಜುನಾಥ ಮುರುಡೇಶ್ವರ ಆರ್ಕಿಟೆಕ್ಟ್ ಇವರು ಸುಂದರವಾಗಿ ದೇವಾಲಯ ನಿರ್ಮಾಣ ಮಾಡಿದ್ದು, ದೇವಾಲಯದ ಸುತ್ತಮುತ್ತಲೂ ಕೆತ್ತನೆ ಮಾಡಲಾಗಿರುವ ಸುಮಾರು ೩೮ ವಿಗ್ರಹಗಳು ನೋಡಲು ನಯನಮನೋಹರವಾಗಿವೆ. ವಿಗ್ರಹ ಮೂರ್ತಿಗಳು ಭಕ್ತರ ಹಾಗೂ ಸುತ್ತಮುತ್ತಲಿನ ಗ್ರಾಮದ ಆಕರ್ಷಣೀಯ ಕೇಂದ್ರವಾಗಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಗುರುವಾರ, ಶುಕ್ರವಾರ ಮೂರು ದಿನಗಳು ಶ್ರೀ ಕರಿಯಮ್ಮ ದೇವಿಯ ದೇವಾಲಯ ಪುನರ್ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ವೇದ, ಮಂತ್ರಘೋಷಗಳಿಂದ ನೂರಾರು ಪುರೋಹಿತ ವರ್ಗದ ಸಹಕಾರದಿಂದ ಸ್ಥಾನ ಶುದ್ಧೀಕರಣ, ನವಗ್ರಹ ಪೂಜೆ, ಅಂಕುರ ಪೂಜೆ, ಶಾಂತಿ ಪ್ರಾಯಶ್ಚಿತ, ಬಿಂಬಶುದ್ಧಿ, ಹೋಮ ಹವನ, ಜೀವಕಲಶ ಸಪ್ತದಿವಾಸಾಂಗ, ಗಂಗೆಪೂಜೆ, ದುರ್ಗಪೂಜೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ದೈವಾಜ್ಞ ಕೇಶವಭಟ್ಟ ನರಸಿಂಹಭಟ್ಟರ ನೇತೃತ್ವದಲ್ಲಿ ಭಕ್ತಿ ಶ್ರದ್ಧಾ ಭಾವದಿಂದ ನೆರವೇರಿಸಲಾಯಿತು.
ವಿದ್ಯತ್ ದೀಪಾಲಂಕಾರ:ಶ್ರೀ ಕರಿಯಮ್ಮ ದೇವಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಹಳೇಬೀಡಿನ ಹೊಯ್ಸಳ ವೃತ್ತ, ಬಸವೇಶ್ವರ ವೃತ್ತ, ರಾಜನಶಿರುಯೂರು ವೃತ್ತ, ಅಂಬೇಡ್ಕರ್ ವೃತ್ತ ಬಸ್ತಿಹಳ್ಳಿ ವೃತ್ತ ಸೇರಿದಂತೆ ಪ್ರಮುಖ ಮುಖ್ಯ ರಸ್ತೆಗಳು, ಬೀದಿಗಳು ಹಾಗೂ ಗ್ರಾಮದ ಇತರ ಎಲ್ಲಾ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಪ್ರತಿಯೊಂದು ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ಮೂರು ದಿನಗಳ ಕಾಲ ಹಬ್ಬದ ವಾತಾವರಣ ಗ್ರಾಮದಲ್ಲಿ ಮನೆಮಾಡಿದ್ದು, ದೀಪಾಲಂಕಾರ ವೀಕ್ಷಣೆ ಮಾಡಲು ಬರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅಚ್ಚುಕಟ್ಟಾದ ಊಟದ ವ್ಯವಸ್ಥೆ:ಬೆಳಗ್ಗೆ, ತಿಂಡಿ ಉಪ್ಪಿಟ್ಟು, ಚಿತ್ರಾನ್ನ, ಪಲಾವ್, ಬೇಳೆ ಬಾತ್, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್, ಪಲ್ಯ, ಕೋಸಂಬರಿ ಸೇರಿದಂತೆ ಊಟದ ಶುಚಿ ಮತ್ತು ರುಚಿ ಗುಣಮಟ್ಟದೊಂದಿಗೆ ಸತತ ಮೂರು ದಿನಗಳಿಂದಲೂ ಪಾಯಸ, ಬೂಂದಿ, ಲಾಡು, ಖಾರ ಸೇರಿದಂತೆ ವಿವಿಧ ರೀತಿಯ ಸಿಹಿ ತಿಂಡಿಗಳೊಂದಿಗೆ ಉತ್ತಮ ಊಟದ ಸವಿಯನ್ನು ಭಕ್ತರಿಗೆ ಉಣಬಡಿಸಲಾಗುತ್ತಿದೆ. ಜತೆಗೆ ಗುಣಮಟ್ಟದ ಊಟದ ವ್ಯವಸ್ಥೆಗಾಗಿ ಪರಿಶೀಲನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ದೇವಾಲಯದ ಟ್ರಸ್ಟಿಗಳ ಮೆಚ್ಚುಗೆಗೂ ಪಾತ್ರವಾಗಿದೆ.
ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ:ಬುಧವಾರ ಮತ್ತು ಗುರುವಾರ ಸಂಜೆ ೭ ಗಂಟೆಯಿಂದ ಹಳೇಬೀಡಿನ, ಕೆಪಿಎಸ್, ಶಾಲೆ, ಶ್ರೀ ಬಸವರಾಜೇಂದ್ರ ಪ್ರೌಢಶಾಲೆ, ಕಲ್ಪತರು ಪದವಿ ಪೂರ್ವ ಕಾಲೇಜು, ಮಂಗಳೂರು ಕಲ್ಪತರು ಶಾಲೆ, ಎಸ್‌ಜಿಆರ್ ಪಬ್ಲಿಕ್ ಸ್ಕೂಲ್, ಶ್ರೀ ಶಾರದ ಪಬ್ಲಿಕ್ ಸ್ಕೂಲ್ ಸೇರಿದಂತೆ ನಾಟ್ಯನಿನಾದ ನೃತ್ಯ ಶಾಲೆ, ೪ ಸ್ಟಾರ್ ನೃತ್ಯ ಶಾಲೆ ಸೇರಿದಂತೆ ವಿವಿಧ ಶಾಲೆಗಳಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮನಸೂರೆಗೊಳಿಸಿದವು.