ಸಾರಾಂಶ
- ಅನ್ನದಾತರ ಕಡೆಗಣಿಸಿರುವ ರಾಜಕೀಯ ಪಕ್ಷಗಳು: ಕುರುಬೂರು ಶಾಂತಕುಮಾರ್ ಆಕ್ರೋಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ತೀವ್ರ ಬರದ ಸಂಕಷ್ಟ ಕಾಡುತ್ತಿದ್ದರೂ ಬರ ಪರಿಹಾರ ನೀಡದ ರಾಜಕೀಯ ಪಕ್ಷಗಳು ಚುನಾವಣೆ ಗುಂಗಿನಲ್ಲೇ ತೇಲಾಡುತ್ತಿವೆ. ಇಂತಹ ಪಕ್ಷಗಳ ಅಭ್ಯರ್ಥಿಗಳ ಹಳ್ಳಿಗಳ ಪ್ರವೇಶಕ್ಕೆ ನಿರ್ಬಂಧಿಸಿ, ಎಚ್ಚರಿಕೆ ಸಂದೇಶ ನೀಡುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 78 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದರೂ ರೈತರಿಗೆ ನೀಡಬೇಕಾದ ಸುಮಾರು ₹2600 ಕೋಟಿ ಬಾಕಿ ಹಣ ಪಾವತಿಸಿಲ್ಲ. ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ಆಯುಕ್ತರು ತಕ್ಷಣ ಕ್ರಮ ಕೈಗೊಂಡು, ಶೇ.15 ಬಡ್ಡಿ ಸೇರಿ ಬಾಕಿ ಹಣ ಕೊಡಿಸಲಿ ಎಂದು ಒತ್ತಾಯಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಪರಸ್ಪರ ಕಾಲೆಳೆದುಕೊಳ್ಳುತ್ತಿವೆ. ಮೊದಲು ಇಂತಹ ನಾಟಕ ಬಿಟ್ಟು, ರೈತರಿಗೆ ಬರ ಪರಿಹಾರ ಕೊಡಿ. ಪರಿಹಾರ ಕೊಡಲಾಗದಿದ್ದರೆ ಮತ ಕೇಳುವುದಕ್ಕೆ ಗ್ರಾಮಗಳಿಗೆ, ರೈತರ ಮನೆ ಬಾಗಿಲುಗಳಿಗೆ ಬರಬೇಡಿ. ಮತ ಕೇಳಲು ಬಂದ ಅಭ್ಯರ್ಥಿಗಳನ್ನು ಗ್ರಾಮೀಣರು, ರೈತರು ಊರಿನಿಂದ ಹೊರಗಿಡಬೇಕು ಎಂದು ಹೇಳಿದರು.ಬರಗಾಲ ಹಿನ್ನೆಲೆಯಲ್ಲಿ ಬಾವಿ, ಕೆರೆ ಕಟ್ಟೆ, ಕೊಳವೆ ಬಾವಿಗಳು ಸಂಪೂರ್ಣ ಬತ್ತಿವೆ. ಕೃಷಿ ಕ್ಷೇತ್ರ ದುರ್ಬಲ ಆಗುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಕಾಣುತ್ತಿಲ್ಲವೇ? ಹಳ್ಳಿಗಳಲ್ಲಿ ಗುಡಿ- ಗೋಪುರ ಕಟ್ಟುವ ಬದಲು ರೈತರು ಎಚ್ಚೆತ್ತುಕೊಳ್ಳಬೇಕು. ಸ್ವಾಭಿಮಾನದಿಂದ, ಕೆರೆ ಕಟ್ಟೆಗಳ ಹೂಳೆತ್ತುವ ಮೂಲಕ ಪುನಶ್ಚೇತನ ಹಾಗೂ ಹೊಸ ಕೆರೆಗಳ ನಿರ್ಮಾಣಕ್ಕೆ ಆಸಕ್ತಿ ತೋರಬೇಕು. ಹೀಗಾದಲ್ಲಿ ಮುಂದಿನ ತಲೆಮಾರಿಗೆ ಬೋರ್‌ಗಳಲ್ಲಿ ನೀರು ಶೇಖರಣೆಯಾಗಿ, ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಾಧ್ಯ. ಈಗಿನ ರಾಜಕಾರಣಿಗಳಿಗೆ ಇದ್ಯಾವುದರ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದ ಸುಮಾರು 10 ಲಕ್ಷ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಕಬ್ಬು, ತೆಂಗು, ಬಾಳೆ ಸೇರಿದಂತೆ ಎಲ್ಲ ಬೆಳೆಗಳೂ ಒಣಗಿವೆ. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ಮೈಮರೆಯದೇ ರೈತರ ಸಂಕಷ್ಟ ಅರಿತು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಅವರನ್ನು ಏ.15ರಂದು ಭೇಟಿ ಮಾಡಿ, ಮನವಿ ಅರ್ಪಿಸಲಿದ್ದೇವೆ ಎಂದರು.ಕೇಂದ್ರ ಸರ್ಕಾರ ದೆಹಲಿ ರೈತ ಚಳವಳಿಯ ಮೇಲೆ ಗೋಲಿಬಾರ್ ನಡೆಸಿ, ರೈತರನ್ನು ಕೊಲ್ಲುತ್ತಿದೆ. ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿ, ಮಾತು ತಪ್ಪಿದೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಹುಸಿಯಾಗಿದೆ. ಬಂಡವಾಳಶಾಹಿಗಳ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡಿ, ಸಂಕಷ್ಟದಲ್ಲಿರುವ ಅನ್ನದಾತರ ಸಾಲ ಮನ್ನಾ ಮಾಡದೇ, ಅಸಡ್ಡೆ ತೋರುತ್ತಿದೆ ಎಂದು ಶಾಂತಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಗಳ ಮುಖಂಡರಾದ ಬಲ್ಲೂರು ರವಿಕುಮಾರ, ಅಂಜಿನಪ್ಪ ಪೂಜಾರ, ಹತ್ತಳ್ಳಿ ದೇವರಾಜ, ಬಸವರಾಜ, ಅಶೋಕ, ವಕೀಲ ಮಂಜುನಾಥ, ತಿರುಮಲೇಶ, ಕರಿಬಸಪ್ಪ, ಬಸಣ್ಣ ಇತರರು ಇದ್ದರು.- - -
ಬಾಕ್ಸ್ ಹೋರಾಟ ಯಶಸ್ಸು ಸದ್ಬಳಕೆ ಮಾಡಿಕೊಳ್ಳಿ 10 ದಿನಗಳ ಹಿಂದೆ ಬಳ್ಳಾರಿ ಗ್ರಾಮೀಣ ಬ್ಯಾಂಕ್ ಮುಂದೆ ರೈತ ಸಂಘಟನೆಗಳ ಹೋರಾಟದಿಂದಾಗಿ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾಲ ಪಡೆದು, ಸಂಕಷ್ಟದಲ್ಲಿರುವ 52 ಸಾವಿರ ರೈತರ ಸಾಲ, ರೈತರ ಮೇಲೆ ನ್ಯಾಯಾಲಯದಲ್ಲಿ ಹೂಡಿದ ಸಾಲದ ದಾವೆಗಳನ್ನು ವಾಪಸ್ ಪಡೆದು, ಒಟಿಎಸ್ ಯೋಜನೆಯಲ್ಲಿ ಸಾಲ ತೀರುವಳಿಗೆ ಗ್ರಾಮೀಣ ಬ್ಯಾಂಕ್ ಮುಖ್ಯಸ್ಥರು ಒಪ್ಪಿದ್ದಾರೆ. ಈ ಹೋರಾಟದ ಯಶಸ್ಸನ್ನು ಸಾಲ ಮಾಡಿರುವ ರೈತರು ಪಡೆದುಕೊಳ್ಳಬೇಕು ಎಂದು ರಾಜ್ಯಾಧ್ಯಕ್ಷ ಶಾಂತಕುಮಾರ್ ತಿಳಿಸಿದರು.- - - ಕೋಟ್ ರೈತರ ಹೆಸರಿನಲ್ಲಿ ಆರಂಭವಾದ ರೈತ ಸಂಘ ರೈತರ ಹಿತರಕ್ಷಣೆಗಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ರಾಜಕೀಯ ಪಕ್ಷದ ಅಡಿಯಾಳಾಗಬಾರದು. ಇಂದು ಕೆಲ ಮುಖಂಡರು ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳ ವಕ್ತಾರರಂತೆ ಮಾತನಾಡುತ್ತ, ರೈತರನ್ನು ಬಲಿ ಕೊಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗವು ನೋಟಾ ಮತದಾನಕ್ಕೆ ಬದಲಾವಣೆ ತರಬೇಕಿದೆ. ನೋಟಾ ಮತದಾನಕ್ಕೂ ಗೌರವ ತರುವಂತಹ ಮಾನದಂಡ ಜಾರಿಗೆ ತರುವ ಕೆಲಸ ಮಾಡಬೇಕು
- ಕುರುಬೂರು ಶಾಂತಕುಮಾರ, ರಾಜ್ಯಾಧ್ಯಕ್ಷ- - - -11ಕೆಡಿವಿಜಿ1, 2:
ದಾವಣಗೆರೆಯಲ್ಲಿ ಗುರುವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.