ಸಾರಾಂಶ
ಭೂಸೇನೆಯಲ್ಲಿ ೨೨ ವರ್ಷಗಳ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಬೆಳ್ತಂಗಡಿಯ ಫ್ರಾನ್ಸಿಸ್ ಅವರಿಗೆ ಹುಟ್ಟೂರಲ್ಲಿ ಸ್ವಾಗತ ಕೋರಲಾಯಿತು.
ಬೆಳ್ತಂಗಡಿ: ಭೂಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಫ್ರಾನ್ಸಿಸ್ ಜೆ. ಅವರು ಹುಟ್ಟೂರಿಗೆ ಆಗಮಿಸಿದ ಸಂದರ್ಭ ಅವರಿಗೆ ಸ್ವಾಗತ ಕೋರಲಾಯಿತು.
ಮೂಲತಃ ಧರ್ಮಸ್ಥಳ ಗ್ರಾಮದ ನೇರ್ತನೆ ನಿವಾಸಿ, ಪ್ರಸ್ತುತ ಸೋಮಂತಡ್ಕದಲ್ಲಿ ನೆಲೆಸಿರುವ ಭೂ ಸೇನೆಯ ಯೋಧ ಫ್ರಾನ್ಸಿಸ್ ಜೆ. ಅವರು ಭಾರತೀಯ ಭೂ ಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ಡಿ.31ರಂದು ನಿವೃತ್ತರಾಗಿದ್ದಾರೆ.ಧರ್ಮಸ್ಥಳದ ಎಬ್ರಿಯಲ್ ಇ.ಎಂ. ಮತ್ತು ಇ.ಎಂ. ಮೇರಿ ದಂಪತಿಯ ಪುತ್ರರಾಗಿರುವ ಅವರು ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿ, ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಪ.ಪೂ ಶಿಕ್ಷಣ ಪಡೆದಿದ್ದಾರೆ. 2002 ರಲ್ಲಿ ಮಂಗಳೂರಿನಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕಾತಿ ಪಡೆದು ಭೋಪಾಲ್‌ನಲ್ಲಿ ಇಲೆಕ್ಟ್ರಾನಿಕಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರೈಸಿ ಅದೇ ವಿಭಾಗದಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಅವರ ಕರ್ತವ್ಯದ ಅವಧಿಯಲ್ಲಿ ಅವರಿಗೆ 9 ವರ್ಷದ ಸೇವೆಗೆ ಪದಕ, 20 ವರ್ಷ ಸೇವೆಗೆ ಪದಕ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದ ಪದಕ, ಶ್ರೀನಗರ ಆರ್ ಆರ್ ನಲ್ಲಿ ಕರ್ತವ್ಯ ಸಲ್ಲಿಸಿದ್ದಕ್ಕಾಗಿ ಪದಕ ಪುರಸ್ಕೃತರಾಗಿದ್ದಾರೆ.ಅವರು ಕರ್ತವ್ಯ ಸಲ್ಲಿಸಿ ಉಜಿರೆಗೆ ಆಗಮಿಸುತ್ತಿದ್ದಂತೆ ಕೆಳಗಿನಪೇಟೆಯ ವೃತ್ತದ ಬಳಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.