ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಷ್ಟವಾದ ನಿವೃತ್ತಿ ಆರ್ಥಿಕ ಸೌಲಭ್ಯ, ಡಿಸಿಆರ್‌ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು ಎಂದು ಆಗ್ರಹಿಸಿ ನಿವೃತ್ತ ನೌಕರರ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡ ನಿವೃತ್ತ ನೌಕರರು ಕಪ್ಪು ಪಟ್ಟಿ ಧರಿಸಿ, ತಕ್ಷಣ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಡಿ.೧-೭-೨೦೨೨ ರಿಂದ ೩೧-೭-೨೦೨೪ರ ಅವಧಿಯಲ್ಲಿ ನಿವೃತ್ತರಾದ ನೌಕರರು ಏಳನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಆರನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯಕ್ಕೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಸಿದರು,
ನಾವುಗಳು ತಾಲೂಕು, ಜಿಲ್ಲೆ, ವಿಭಾಗ ಮಟ್ಟದಲ್ಲಿ ಬೃಹತ್ ಸಭೆಗಳನ್ನು ಜರುಗಿಸಿದ್ದೇವೆ. ವಿಶೇಷವಾಗಿ ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ಸೆ.೧೮ರಂದು ನಮ್ಮ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಅಡಿಯಲ್ಲಿ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ನಿವೃತ್ತ ನೌಕರರ ಸಂಘಗಳು ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಕ್ಷರಿಯವರ ಮತ್ತು ಡಾ.ಎಲ್.ಬೈರಪ್ಪನವರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ 12,000 ನಿವೃತ್ತ ನೌಕರರು ಸಮಾವೇಶಗೊಂಡು ನಮ್ಮ ಬೇಡಿಕೆ ಕುರಿತು ಹಕ್ಕೊತ್ತಾಯದ ಚಿನ್ನವತ್ತಳೆ ಅರ್ಪಿಸಿದ್ದೇವೆ ಎಂದರು.ನಿವೃತ್ತರಾದ ನೌಕರರಿಗೆ ಡಿಸಿಆರ್‌ಜಿ, ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕೆಂದು ಹಾಗೂ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಇಂದು ಸಹ ಈ ಪ್ರತಿಭಟನೆ ಮೂಲಕ ಆಗ್ರಹಿಸುತ್ತೇವೆ ಎಂದರು. ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದರು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಶಿವಣ್ಣ, ಎನ್.ಆರ್.ಶಿವಸ್ವಾಮಿ, ಎಚ್.ಮಹದೇವಯ್ಯ, ಗುರುಸಿದ್ದಪ್ಪ, ಭಾಗ್ಯ, ಶಶಿಕಲಾ, ಲಿಂಗರಾಜು, ಜಯಮ್ಮ, ವೀಣಾ, ನಾಗರತ್ನ ಇತರರು ಭಾಗವಹಿಸಿದ್ದರು.