ಸಾರಾಂಶ
ಕುದೂರು: ಸರ್ಕಾರಿ ಸೇವೆ ಮಾಡಿ ಯಾವೊಂದು ಕಪ್ಪು ಚುಕ್ಕೆ ಇಲ್ಲದಂತೆ ನಿವೃತ್ತರಾಗುವುದು ನಿಜಕ್ಕೂ ಇಂದಿನ ಕಾಲಘಟ್ಟದಲ್ಲಿ ಸವಾಲಿನ ಕೆಲಸವೇ ಸರಿ ಎಂದು ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಕುಮಾರಸ್ವಾಮಿ ಹೇಳಿದರು.
ಕುದೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಸತಿ ಗೃಹದ ಮೇಲ್ವಿಚಾರಕಿಯಾಗಿ ನಿವೃತ್ತರಾದ ಜಗದಾಂಬರವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳ ವಸತಿ ನಿಲಯದಲ್ಲಿ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವುದು ಎಂದರೆ ಅದು ಸೂಜಿಯ ಮೇಲೆ ನಡೆದಂತೆ. ಎಷ್ಟು ಎಚ್ಚರ ವಹಿಸಿದರೂ ಒಂದಲ್ಲಾ ಒಂದು ತಪ್ಪುಗಳಾಗುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳು ಚುರುಕಾದ ನಂತರವಂತೂ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವಂತಾಗಿದೆ. ಇಂತಹ ಸಂದರ್ಭಗಳಲ್ಲೂ ಪ್ರತಿಯೊಂದನ್ನೂ ಧೈರ್‍ಯದಿಂದ ಎದುರಿಸಿ ನಿವೃತ್ತರಾದ ಜಗದಾಂಬರಂತಹ ಮಮತಾಮಯಿ ನೌಕರರು ಸಾವಿರ ಪಟ್ಟು ಹೆಚ್ಚಾಗಲಿ ಎಂದು ಆಶಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಮಾತನಾಡಿ, ಸರ್ಕಾರಿ ನೌಕರಿಯಲ್ಲಿ ಸಂಬಳಕ್ಕಾಗಿ ಕರ್ತವ್ಯ ನಿರ್ವಹಿಸುವವರದೊಂದು ವರ್ಗ. ಅದೊಂದು ದೇವರ ಕೆಲಸ ನಾವು ಮಾಡುವ ಪ್ರತಿದಿನದ ಕೆಲಸ ಆತನಿಗೆ ಸಮರ್ಪಿಸುವ ಕೃತಜ್ಞತೆಯ ಪುಷ್ಪ ಎಂದು ಭಾವಿಸುವವರದ್ದು ಮತ್ತೊಂದು ವರ್ಗ. ಹೀಗೆ ಮಾಡುವ ಕೆಲಸವನ್ನು ಭಗವಂತನ ಪೂಜೆ ಎಂದು ಮಾಡುವ ವರ್ಗವೂ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದು ಅಂತಹ ನೆನಪನ್ನು ಜಗದಾಂಬರವರು ಉಳಿಸಿದ್ದಾರೆ ಎಂದು ಹೇಳಿದರು.ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ನಾಗಮಣಿ, ಗ್ರಾಪಂ ಸದಸ್ಯ ಯತೀಶ್, ಕೃಷ್ಣಪ್ರಸಾದ್, ನಿವೃತ್ತ ಮುಖ್ಯೋಪಾದ್ಯಾಯ ಗೋಪಾಲ್, ವಿದ್ಯಾ, ನಿರಂಜನ್, ರೇಖಾ, ಸದಾನಂದ್, ಕಸಾಪ ಕಾರ್‍ಯದರ್ಶಿ ಮಂಜುನಾಥ್, ಶಿವಕುಮಾರ್, ಪರಮಶಿವಯ್ಯ, ರವಿ ಮತ್ತಿತರರು ಭಾಗವಹಿಸಿದ್ದರು.