ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲೆಂದು ಆರೋಗ್ಯ ಬಂಧು ಯೋಜನೆಯಡಿ ಕಾರ್ಯನಿರ್ವಹಿಸಲು ಕಳೆದ ೭ ವರ್ಷಗಳ ಹಿಂದೆ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸರ್ಕಾರದ ವತಿಯಿಂದ ದತ್ತು ನೀಡಿದ್ದ ತಾಲೂಕಿನ ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ್ಯ ಬಂಧು ಯೋಜನೆಯಿಂದ ಹಿಂಪಡೆಯಲಾಗಿದೆ.ತಾಲೂಕಿನ ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರವನ್ನು ಕಳೆದ ೨೦೧೭ರ ಡಿ.೧೬ರಂದು ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಆರೋಗ್ಯ ಬಂಧು ಯೋಜನೆಯಡಿ ದತ್ತು ನೀಡಲಾಗಿತ್ತು.
ನಿಯಮಾವಳಿ ಉಲ್ಲಂಘನೆ:ಆದರೆ ದತ್ತು ಪಡೆದಿರುವ ಸಂಸ್ಥೆ ಪೂರ್ಣ ಪ್ರಮಾಣದ ತಜ್ಞ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳದೇ ನಿಯಮಾವಳಿಯಂತೆ ಪೂರ್ಣ ಸೇವೆ ನೀಡದೇ ಉಲ್ಲಂಘಿಸಿತ್ತು. ಅಲ್ಲದೇ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ದಾರಿ ತಪ್ಪಿಸಿ ಕರ್ತವ್ಯ ಲೋಪ ಎಸಗಿರುತ್ತಾರೆಂದು ಆರ್‌ಟಿಐ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಕುಮಾರ್ ಹಾಗೂ ಕೆಆರ್‌ಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದರು.
ದೂರಿನ ಬಗ್ಗೆ ತನಿಖೆ:ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದ್ದರು. ಸಮಗ್ರವಾಗಿ ತನಿಖೆ ನಡೆಸಿದ ಅಧಿಕಾರಿಗಳು ಗರ್ಭಿಣಿ, ಬಾಣಂತಿ ಮತ್ತು ಮಕ್ಕಳಿಗೆ ಕಾಲ ಕಾಲಕ್ಕೆ ಚುಚ್ಚುಮದ್ದು ಮತ್ತು ಇತರೆ ಸೇವೆ ನೀಡಲು ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯ ೪ ಹುದ್ದೆಗಳ ಪೈಕಿ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಕ್ಷೇತ್ರ ಮಟ್ಟದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆ ಭರ್ತಿ ಮಾಡಿರಲಿಲ್ಲ. ಇದರಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಕುಂಠಿತವಾಗಿವೆ. ಆರೋಗ್ಯ ಬಂಧು ಯೋಜನೆಗೆ ಒಳಪಟ್ಟಾಗಿನಿಂದಲೂ ಕ್ಷ-ಕಿರಣ ತಜ್ಞರು ಮತ್ತು ನೇತ್ರಾಧಿಕಾರಿಗಳನ್ನು ನೇಮಕ ಮಾಡದಿರುವುದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವಂತಾಗಿದೆ.
ಯೋಜನೆಯ ಸೌಲಭ್ಯ ಸಿಗುತ್ತಿಲ್ಲ:ದಂತ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರೂ ಕೂಡ ಸಾರ್ವಜನಿಕರಿಗೆ ದಂತ ಜೋಡಣೆ, ಪಿಲ್ಲಿಂಗ್ ಸೇರಿದಂತೆ ಹಲ್ಲಿಗೆ ಸಂಬಂಧಿಸಿದ ಚಿಕಿತ್ಸೆ ಮತ್ತು ದಂತಭಾಗ್ಯ ಯೋಜನೆಯ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಗ್ರೂಪ್ ಡಿ ನೌಕರರ ೧೨ ಹುದ್ದೆಗಳು ಮಂಜೂರಾಗಿದ್ದರೂ ಸಹ ೬ ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಆಸ್ಪತ್ರೆಯ ಸ್ವಚ್ಛತೆ ಮತ್ತು ಸೇವೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಬೆಳ್ಳೂರು ಪ.ಪಂ. ವ್ಯಾಪ್ತಿಯಲ್ಲಿ ೧೫೩೯೦ ಜನಸಂಖ್ಯೆಯಿದ್ದು, ರಾತ್ರಿ ಸಮಯದಲ್ಲಿ ಯಾವುದೇ ವೈದ್ಯರಿಲ್ಲದೇ ತುರ್ತು ಸಂದರ್ಭದಲ್ಲಿ ಸೇವೆ ಸಿಗುತ್ತಿಲ್ಲ. ಇಸಿಜಿ ಸೌಲಭ್ಯ ಸಿಗದೇ ಸಾರ್ವಜನಿಕರು ಖಾಸಗಿ ಹಾಗೂ ಇತರೆ ಆಸ್ಪತ್ರೆಗಳನ್ನು ಅವಲಂಬಿಸುತ್ತಿದ್ದಾರೆ.
ಆರೋಗ್ಯ ಸೇವೆಗಳಿಂದಲೂ ವಂಚಿತ:ಸಮುದಾಯ ಆರೋಗ್ಯ ಕೇಂದ್ರವನ್ನು ದತ್ತು ಪಡೆದಾಗಿನಿಂದ ಮಂಜೂರಾದ ಹುದ್ದೆಗಳಲ್ಲಿ ಸ್ತ್ರೀರೋಗ, ಅರವಳಿಕೆ ತಜ್ಞರು, ಕ್ಷ ಕಿರಣ ತಂತ್ರಜ್ಞರು ಸೇರಿ ಅಗತ್ಯ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡದೆ ಆರೋಗ್ಯ ಇಲಾಖೆಯ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ. ಆರೋಗ್ಯ ಬಂಧು ಯೋಜನೆಗೆ ಹಸ್ತಾಂತರಿಸುವ ಮುನ್ನ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಸುಮಾರು ೪೦ ರಿಂದ ೫೦ ಹೆರಿಗೆಗಳು ಆಗುತ್ತಿದ್ದವು. ದತ್ತು ನೀಡಿದ ನಂತರದ ೭ ವರ್ಷಗಳಲ್ಲಿ ಕೇವಲ ೯೬ ಹೆರಿಗೆಗಳಾಗಿವೆ. ಹಾಗಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಕುಂಠಿತವಾಗಿವೆ ಎಂದು ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.
ತುರ್ತಾಗಿ ಹಿಂಪಡೆದ ಸರ್ಕಾರ:ಈ ಹಿನ್ನೆಲೆಯಲ್ಲಿ ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ್ಯ ಬಂಧು ಯೋಜನೆಯಿಂದ ತುರ್ತಾಗಿ ಸರ್ಕಾರಕ್ಕೆ ಹಿಂಪಡೆದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೈದ್ಯರು ಮತ್ತು ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಿ ಕರ್ತವ್ಯ ನಿರ್ವಹಿಸುವಂತೆ ಕ್ರಮವಹಿಸುವುದು ಹಾಗೂ ಸಿಬ್ಬಂದಿ ಕೊರತೆ ಇದ್ದಲ್ಲಿ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದರು.
ಆದರೂ ಕೂಡ ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರವನ್ನು ಈವರೆಗೂ ಸರ್ಕಾರದ ಸುಪರ್ದಿಗೆ ನೀಡಲು ವಿಳಂಬ ನೀತಿ ಅನುಸರಿಸಿದ್ದ ಹಿನ್ನೆಲೆಯಲ್ಲಿ ೨೦೨೪ರ ಜು.೧೫ರಿಂದ ಜಾರಿಗೆ ಬರುವಂತೆ ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ್ಯ ಬಂಧು ಯೋಜನೆಯಿಂದ ಹಿಂಪಡೆಯಲಾಗಿದೆ.ದಾಖಲಾತಿ, ಪರಿಕರ ಹಿಂಪಡೆಯಲು ಸೂಚನೆ:
ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಮತ್ತು ಪರಿಕರಗಳನ್ನು ತಾಲೂಕು ಆರೋಗ್ಯಾಧಿಕಾರಿಗಳಿಗೆ ಕೂಡಲೇ ಹಸ್ತಾಂತರಿಸುವಂತೆ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪತ್ರ ಮುಖೇನ ತಿಳಿಸಿದ್ದಾರೆ.