ಕಂದಾಯ ಇಲಾಖೆಯ ಚೆಲ್ಲಾಟ: ಸಾಗುವಳಿದಾರರಿಗೆ ಪ್ರಾಣ ಸಂಕಟ
KannadaprabhaNewsNetwork | Published : Oct 10 2023, 01:00 AM IST
ಕಂದಾಯ ಇಲಾಖೆಯ ಚೆಲ್ಲಾಟ: ಸಾಗುವಳಿದಾರರಿಗೆ ಪ್ರಾಣ ಸಂಕಟ
ಸಾರಾಂಶ
ಕಂದಾಯ ಇಲಾಖೆಯ ಚೆಲ್ಲಾಟ: ಸಾಗುವಳಿದಾರರಿಗೆ ಪ್ರಾಣ ಸಂಕಟ
ಅರಣ್ಯ ಮತ್ತು ಕಂದಾಯ ಭೂಮಿಯ ಸಂಘರ್ಷ । 1964 ರಲ್ಲಿ ವೇದಿಕೆ ಸೃಷ್ಟಿ । ಜನರ ಕೊರಳಿಗೆ ಸುತ್ತಿಕೊಂಡ ಜಿಲ್ಲಾಧಿಕಾರಿಗಳ ಪರಮಾಧಿಕಾರ ಸೂತ್ರ ಅರಣ್ಯರೋಧನ- 2 ಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕಂದಾಯ ಇಲಾಖೆ ಚೆಲ್ಲಾಟ; ಸಾಗುವಳಿದಾರರಿಗೆ ಪ್ರಾಣ ಸಂಕಷ್ಟ. - ಇದು, ಜಿಲ್ಲೆಯ ಸಾವಿರಾರು ಜನರ ಅರಣ್ಯರೋಧನ. 1964 ರಿಂದ 1991 ರ ವರೆಗೆ ಕಂದಾಯ ಇಲಾಖೆ ಇಟ್ಟ ಅಂಧಕಾರದ ನಡೆ, ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಜತೆಗೆ ನೆಮ್ಮದಿ ಜೀವನದ ಮೇಲೆ ಕಾರ್ಮೋಡ ಕವಿದಂತೆ ಮಾಡಿದೆ. ಈ ಪರಿಸ್ಥಿತಿ ಇಂದಿಗೂ ಕೂಡ ಜೀವಾಂತವಾಗಿದೆ. ಭೂ ವಿಂಗಡಣೆ: 1964 ರಲ್ಲಿ ಭೂಮಿಯನ್ನು ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ವಿಂಗಡಣೆ ಮಾಡಲು ಕಂದಾಯ ಇಲಾಖೆ ಆದೇಶ ಹೊರಡಿಸಿತು. ಅಂದರೆ, ಎ, ಬಿ, ಸಿ ಹಾಗೂ ಡಿ, ಹೀಗೆ ನಾಲ್ಕು ವಿಭಾಗಗಳಾಗಿ ವಿಂಗಡಿಸುವಂತೆ ಸೂಚನೆ ನೀಡಿತು. ಎ ಆ್ಯಂಡ್ ಬಿ (ನೀರಾವರಿ ಪ್ರದೇಶದ ಜಮೀನುಗಳು, ಸಿ ಆ್ಯಂಡ್ ಡಿ (ಮಳೆ ಆಶ್ರಿತ ಹಾಗೂ ಬರಡು ಭೂಮಿ). ಈ ಪ್ರಕ್ರಿಯೆ 1988 ಕ್ಕೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಹಲವೆಡೆ ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸದೆ, ಗೋಮಾಳ, ಸೊಪ್ಪಿನಬೆಟ್ಟ, ಖರಾಬು ಜಾಗವೂ ಒಳಗೊಂಡಂತೆ ಸಿ ಆ್ಯಂಡ್ ಡಿ ವಿಭಾಗದ ಸರ್ವೆ ನಂಬರ್‌ಗಳ ಸಹಿತ ಭೂ ವಿಂಗಡಣೆ ವರದಿ ನೀಡಿದರು. ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಜಿಲ್ಲಾಧಿಕಾರಿಗೆ ಪರಮಾಧಿಕಾರ ಇರುವುದರಿಂದ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಪರಭಾರೆ ಮಾಡಲಾಯಿತು. 1988 ರಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಯವರು ಒಂದು ಹೆಜ್ಜೆ ಮುಂದೆ ಹೋಗಿ, ಅರಣ್ಯ ಇಲಾಖೆಗೆ ಕೊಟ್ಟಿರುವ ಜಮೀನನ್ನು ದಟ್ಟ ಅರಣ್ಯ ಎಂಬುದಾಗಿ ಮ್ಯುಟೇಷನ್ (ಭೂ ವರ್ಗಾವಣೆ) ಕೂಡ ಬರೆಸಿದರು. ಅವರು ಆ ತೀರ್ಮಾನ ತೆಗೆದುಕೊಳ್ಳದೆ ಹೋಗಿದ್ದರೆ, ಗೋಮಾಳ, ಸೊಪ್ಪಿನ ಬೆಟ್ಟ, ಖರಾಬು ಜಾಗದ ಗೊಂದಲ ಈ ಮಟ್ಟದಲ್ಲಿ ಗಂಭೀರತೆ ಪಡೆದುಕೊಳ್ಳುತ್ತಿರಲಿಲ್ಲ ಎಂದು ಕಂದಾಯ ಇಲಾಖೆ ನಿವೃತ್ತ ಉಪ ತಹಸೀಲ್ದಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ----- ಬಾಕ್ಸ್ ------ ಬ್ರೇಕ್ ಹಾಕಿದ ಬಂಗಾರಪ್ಪ ಅರಣ್ಯ ಇಲಾಖೆಗೆ ಸಿ ಆ್ಯಂಡ್ ಡಿ ಭೂಮಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಸ್ಥಗಿತ ಗೊಳಿಸಬೇಕೆಂದು 1991 ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತೆಗೆದುಕೊಂಡ ಈ ತೀರ್ಮಾನಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದರು. ಸಿಎಂಗೆ ಅರಣ್ಯ ಸಂರಕ್ಷಣೆಯ ಬಗ್ಗೆ ಕಾಳಜಿ ಇಲ್ಲ ಎಂದು ಕೊಂಕು ಮಾತುಗಳನ್ನಾಡಿದರು. ಅದ್ಯಾವುದಕ್ಕೂ ಅವರು ಕ್ಯಾರೆ ಎನ್ನಲಿಲ್ಲ. ಆಗ ಚಿಕ್ಕಮಗಳೂರಿನಲ್ಲಿ ಸುಬ್ರಹ್ಮಣ್ಯ ಅವರು ಜಿಲ್ಲಾಧಿಕಾರಿ ಯಾಗಿದ್ದರು. ಅರಣ್ಯ ಎಂಬುದಾಗಿ ಮ್ಯುಟೇಷನ್ ಆಗಿರುವ ಪಟ್ಟಿಯನ್ನು ಹೊರತುಪಡಿಸಿ ಇನ್ನುಳಿದ ಭೂಮಿಯನ್ನು ಕಂದಾಯ ಇಲಾಖೆ ಅಧೀನದಲ್ಲಿಯೇ ಉಳಿಸಿಕೊಂಡರು. --------- ದಾನಶೂರರು- ಜಿಪುಣರು ಈ ವಿವಾದದಲ್ಲಿ ಎರಡು ಇಲಾಖೆಗಳು ಶೂರರೇ, ಆದರೆ, ಒಬ್ಬರು ದಾನ ಶೂರರು (ಕಂದಾಯ ಇಲಾಖೆ), ಇನ್ನೋರ್ವರು ಜಿಪುಣರು (ಅರಣ್ಯ ಇಲಾಖೆ). ಅರಣ್ಯ ಇಲಾಖೆಗೆ ಕೊಟ್ಟಿರುವ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಲು 1963 ರಲ್ಲಿ ಜಾರಿಗೆ ಬಂದ ಕರ್ನಾಟಕ ಅರಣ್ಯ ಕಾಯ್ದೆಯಲ್ಲಿ ಅವಕಾಶ ನೀಡಲಾಗಿತ್ತು. ಆದರೆ, 1980 ರಲ್ಲಿ ಜಾರಿಗೆ ಬಂದ ಕೇಂದ್ರದ ಅರಣ್ಯ ಸಂರಕ್ಷಣಾ ಕಾಯ್ದೆ, ಕರ್ನಾಟಕ ರಾಜ್ಯದ 1963ರ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಿತು. ಇದು, ಭೂಮಿ ಪರಭಾರೆಗೆ ತಡೆಯೊಡ್ಡಿತು. ಹಾಗಾಗಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಆಗಾಗ ಹಾವು, ಮುಂಗುಸಿಯಂತೆ ಕಾದಾಡುತ್ತಲೇ ಇವೆ. ----