ತಂತ್ರಜ್ಞಾನದ ಅಳವಡಿಕೆ, ಆನ್‌ಲೈನ್ ಸೇವೆಗಳ ವಿಸ್ತರಣೆ, ಭೂ ದಾಖಲೆಗಳ ಡಿಜಿಟಲೀಕರಣ, ಸೇವೆಗಳ ಸರಳೀಕರಣ ಹಾಗೂ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಮತ್ತು ಸುಲಭ ಸೇವೆ ಒದಗಿಸುವ ಪ್ರಯತ್ನ ನಡೆಯುತ್ತಿವೆ.
ಶಿರಹಟ್ಟಿ: ಕಂದಾಯ ಇಲಾಖೆಯ ಸಿಬ್ಬಂದಿ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ಸೇವಾ ಮನೋಭಾವದಿಂದ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಕಂದಾಯ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಕಂದಾಯ ಇಲಾಖೆ, ವೈದ್ಯರು ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಕಚೇರಿ ಆವರಣದಲ್ಲಿ ಸಸಿ ನೆಟ್ಟು ನಂತರ ನಡೆದ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ.
ತಂತ್ರಜ್ಞಾನದ ಅಳವಡಿಕೆ, ಆನ್‌ಲೈನ್ ಸೇವೆಗಳ ವಿಸ್ತರಣೆ, ಭೂ ದಾಖಲೆಗಳ ಡಿಜಿಟಲೀಕರಣ, ಸೇವೆಗಳ ಸರಳೀಕರಣ ಹಾಗೂ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಮತ್ತು ಸುಲಭ ಸೇವೆ ಒದಗಿಸುವ ಪ್ರಯತ್ನ ನಡೆಯುತ್ತಿವೆ. ಈ ಸುಧಾರಣೆಗಳಿಂದ ಕಂದಾಯ ಇಲಾಖೆ ಇನ್ನಷ್ಟು ಜನಸ್ನೇಹಿ ಮತ್ತು ಜನಪರವಾಗುವ ನಿರೀಕ್ಷೆ ಇದೆ ಎಂದರು.ವೈದ್ಯರ ಸೇವೆಯನ್ನು ದೇವರ ಸೇವೆಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಸತ್ಯದ ಅನ್ವೇಷಣೆ ಮಾಡುವ ದಿಕ್ಕಿನಲ್ಲಿ ಪತ್ರಕರ್ತರ ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಿವೆ. ಆದ್ದರಿಂದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಬೇಕಾದ ವಸ್ತುನಿಷ್ಠವಾದ ವರದಿಗಳನ್ನು ಪತ್ರಕರ್ತರು ಪ್ರಕಟಿಸುವ ಮೂಲಕ ಜನರ ನಂಬಿಕೆಯನ್ನು ಉಳಿಸಿಕೊಂಡು ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾಜ್ ಮಾತನಾಡಿ, ರೋಗಿಗಳಿಗೆ ವೈದ್ಯರಿಂದ ಉತ್ತಮ ಸೇವೆ ದೊರೆತಾಗ ಮಾತ್ರ ವೈದ್ಯ ವೃತ್ತಿಗೆ ಇನ್ನಷ್ಟು ಗೌರವ ಸಿಗುತ್ತದೆ. ರೋಗಿಗಳೊಂದಿಗೆ ಆತ್ಮೀಯವಾಗಿ ವರ್ತಿಸಿ, ಸಮಯೋಚಿತ ಚಿಕಿತ್ಸೆ ನೀಡುವುದು, ಕರುಣೆ ಮತ್ತು ಮಾನವೀಯತೆಯಿಂದ ಸೇವೆ ಸಲ್ಲಿಸುವುದು ವೈದ್ಯರ ವೃತ್ತಿಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.ಡಾ. ಸುನೀಲ ಬುರಬುರೆ ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ವಿ.ಎ. ಮುಳಗುಂದಮಠ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಶಿರಸ್ತೇದಾರ ಅಂತೋಷ ಅಸ್ಕಿ, ಗಿರಿಜಾ ಪೂಜಾರ, ಎಚ್.ಜೆ. ಭಾವಿಕಟ್ಟಿ, ಶಂಕರ ಮರಾಠೆ, ಸಂತೋಷ ಡೋಣಿ ಸೇರಿದಂತೆ ಅನೇಕರು ಇದ್ದರು.