ಉಳ್ಳಾಲ ದುರಂತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ

| Published : Jun 27 2024, 01:03 AM IST

ಉಳ್ಳಾಲ ದುರಂತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮದನಿನಗರ ದುರಂತ ಕುರಿತು ಅಪಾರ ನೋವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಸ್ಥಳಕ್ಕೆ ತೆರಳಲು ಆದೇಶಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಉಳ್ಳಾಲ: ಇಲ್ಲಿನ ಮದನಿನಗರದಲ್ಲಿ ಕಂಪೌಂಡ್‌ ಕುಸಿದ ದಂಪತಿ ಸಹಿತ ಇಬ್ಬರು ಮಕ್ಕಳು ಮೃತಪಟ್ಟ ದುರಂತ ಸ್ಥಳಕ್ಕೆ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪೂರ್ವನಿಯೋಜಿತವಾದ ತಮ್ಮೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿನಿಂದ ಸಂಜೆ ವೇಳೆಗೆ ಆಗಮಿಸಿದರು. ಕ್ಷೇತ್ರದ ಶಾಸಕ, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಜತೆಗಿದ್ದು ಘಟನೆ ಕುರಿತು ಸಚಿವರಿಗೆ ವಿವರ ನೀಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಗ್ರಾ.ಪಂ. ಅಧಿಕಾರಿಗಳ ಮೂಲಕ ಅಪಾಯಕಾರಿ ಪಾಯಿಂಟ್‌ಗಳನ್ನು ಸರ್ವೇ ನಡೆಸಲು ಸೂಚಿಸಲಾಗಿದೆ. ತೀವ್ರತರದಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಈ ಕುರಿತು ಆದೇಶಿಸುವುದಾಗಿ ತಿಳಿಸಿದರು.

ಕರಾವಳಿ ಭಾಗಗಳಲ್ಲಿ ಬೆಟ್ಟ ಕಡಿದು ಮನೆಗಳನ್ನು ನಿರ್ಮಿಸಿರುವುದರಿಂದ ಭೂಕುಸಿತಗಳು ನಡೆಯುತ್ತಲೇ ಬಂದಿದೆ. ಜನ ಅನಿವಾರ್ಯವಾಗಿ ಕಟ್ಟುತ್ತಾರೆ. ಆದರೆ ಕಟ್ಟುವಾಗ ಅಡಿಪಾಯವನ್ನು ಗಟ್ಟಿಯಾಗಿಸಿ, ನೆರೆಮನೆಯ ಕಂಪೌಂಡ್ ವಾಲ್‌ಗಳು 20 ಫೀಟ್ ಎತ್ತರವಿದ್ದರೂ ಸುರಕ್ಷತಾ ಕ್ರಮವಹಿಸದೆ ಕಟ್ಟುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಇಂತಹ ವ್ಯವಸ್ಥೆ ಇದ್ದರೂ ಸಾವಿರಕ್ಕೆ ಒಂದು ಮನೆಗೆ ಇಂಥ ಅನಾಹುತ ಸಂಭವಿಸುತ್ತದೆ. ಆಗ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಮದನಿನಗರ ದುರಂತ ಕುರಿತು ಅಪಾರ ನೋವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಸ್ಥಳಕ್ಕೆ ತೆರಳಲು ಆದೇಶಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಮೃತರ ಕುಟುಂಬಕ್ಕೆ ಪರಿಹಾರ ಕ್ರಮದ ಕುರಿತು ಜಿಲ್ಲಾಡಳಿತದೊಂದಿಗೆ ಮಾತನಾಡುತ್ತೇನೆ ಎಂದರು.

ತಡೆಗೋಡೆ ಕಟ್ಟಲು ಹೋದರೆ ಮಲೆನಾಡು ಭಾಗದಲ್ಲಿ ಇಡೀ ಗೋಡೆಗಳನ್ನೇ ಕಟ್ಟುತ್ತಾ ಹೋಗಬೇಕಾಗುತ್ತದೆ. ಸದ್ಯ ರಸ್ತೆ ಬದಿಯ ಕುಸಿತಗಳನ್ನು ಗುರುತಿಸಿ 70 ಕೋಟಿ ರುಪಾಯಿ ಅನುದಾನ ಬಿಡುಗಡೆಗೊಳಿಸಲು ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ ಎಂದರು.ಜಾಸ್ತಿ ಕಡಲ್ಕೊರೆತ ಬಾಧಿತ ಪ್ರದೇಶಕ್ಕೆ ಪರಿಹಾರ ಕ್ರಮಕೈಗೋಳ್ಳಲು ಸ್ಪೀಕರ್‌ ಅವರು ರೂ. 80 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

ಈ ಸಂದರ್ಭ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.