ಧರ್ಮಗುರು ಡೆನಿಸ್ ಡೆಸಾ ಜನ್ಮದಿನ ಸಂಭ್ರಮ: ಕೃತಜ್ಞತಾ ಬಲಿಪೂಜೆ

| Published : Sep 21 2024, 02:03 AM IST

ಸಾರಾಂಶ

ಬಲಿಪೂಜೆಯ ಬಳಿಕ ಕಿರು ಸನ್ಮಾನ ಕಾರ್ಯಕ್ರಮ ಚರ್ಚ್ ಆಡಳಿತ ಮಂಡಳಿಯಿಂದ ಜರುಗಿತು. ಧರ್ಮಪ್ರಾಂತ್ಯದ ಪರವಾಗಿ ಶ್ರೇಷ್ಠ ಗುರುಗಳು, ಸರ್ವಧರ್ಮ ಸಮಿತಿಯ ವತಿಯಿಂದ ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ತೊಟ್ಟಂ ಸಂತ ಅನ್ನಮ್ಮ ಚರ್ಚ್‌ ಪ್ರಧಾನ ಧರ್ಮಗುರು ಡೆನಿಸ್ ಡೆಸಾ ಅವರ 60ನೇ ಜನ್ಮದಿನ ವಜ್ರಮಹೋತ್ಸವ ಸಂಭ್ರಮ ಶುಕ್ರವಾರ ಚರ್ಚ್‌ನಲ್ಲಿ ನಡೆಯಿತು.

ಧರ್ಮಗುರು ಡೆನಿಸ್ ಡೆಸಾ, ದೇವರು ತನಗೆ ನೀಡಿದ ಜೀವನಕ್ಕಾಗಿ ಕೃತಜ್ಞತಾ ಬಲಿಪೂಜೆಯನ್ನು ಸಹ ಯಾಜಕರೊಂದಿಗೆ ಅರ್ಪಿಸಿದರು.

ಈ ವೇಳೆ ಪ್ರವಚನ ನೀಡಿದ ದೇರೆಬೈಲ್ ಚರ್ಚ್‌ ಪ್ರಧಾನ ಧರ್ಮಗುರು ಜೋಸೆಫ್‌ ಮಾರ್ಟಿಸ್, ಜೀವನ ದೇವರು ನಮಗೆ ನೀಡಿರುವ ವರವಾಗಿದ್ದು, ಅದರೊಂದಿಗೆ ಸೇವೆ ಮತ್ತು ಜವಾಬ್ದಾರಿಯನ್ನು ಕೂಡ ನೀಡಿದ್ದಾರೆ. ಸಮಾಜದಲ್ಲಿ ಸರ್ವರೊಂದಿಗೆ ಬೆರೆತು ನಮ್ಮ ಜೀವನವನ್ನು ಪರರ ಒಳಿತಿಗಾಗಿ ಉಪಯೋಗಿಸಿಕೊಂಡು ದೇವರ ವಾಕ್ಯದಂತೆ ಬದುಕಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣಲು ಸಾಧ್ಯವಿದೆ. ವಂ.ಡೆನಿಸ್ ಡೆಸಾ ತನ್ನ ಜೀವಿತಾವಧಿಯಲ್ಲಿ ಎಲ್ಲರೊಂದಿಗೆ ಬೆರೆತು ಯೇಸುವಿನ ನೈಜ ಸೇವಕರಾಗಿ ಸಮಾಜದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.

ಬಲಿಪೂಜೆಯ ಬಳಿಕ ಕಿರು ಸನ್ಮಾನ ಕಾರ್ಯಕ್ರಮ ಚರ್ಚ್ ಆಡಳಿತ ಮಂಡಳಿಯಿಂದ ಜರುಗಿತು. ಧರ್ಮಪ್ರಾಂತ್ಯದ ಪರವಾಗಿ ಶ್ರೇಷ್ಠ ಗುರುಗಳು, ಸರ್ವಧರ್ಮ ಸಮಿತಿಯ ವತಿಯಿಂದ ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ವಿವಿಧ ಚರ್ಚ್‌ಗಳ ಧರ್ಮಗುರುಗಳಾದ ಫ್ರೆಡ್ ಮಸ್ಕರೇನ್ಹಸ್ ಬೆಳ್ಮಣ್, ಕ್ಲೇಮಂಟ್ ಮಸ್ಕರೇನ್ಹಸ್ ಕಾರ್ಕಳ, ಉಜ್ವಾಡ್ ಪತ್ರಿಕೆಯ ಸಂಪಾದಕ ಆಲ್ವಿನ್ ಸಿಕ್ವೇರ, ಅಶ್ವಿನ್ ಆರಾನ್ಹಾ, ಜಿತೇಶ್ ಕ್ಯಾಸ್ತಲಿನೋ, ವಿಕಾಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಚಾಲಕರಾದ ವನಿತಾ ಫರ್ನಾಂಡಿಸ್, ತೊಟ್ಟಂ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ ಉಪಸ್ಥಿತರಿದ್ದರು. ಲೆಸ್ಲಿ ಅರೋಝಾ ಕಾರ್ಯಕ್ರಮ ನಿರೂಪಿಸಿದರು.

-------ಬಡವರಿಗೆ ಮನೆ ನಿರ್ಮಿಸಲು ಮನವಿಜನ್ಮದಿನದ ಪ್ರಯುಕ್ತ ಅದ್ದೂರಿ ಆಚರಣೆಯ ಬದಲಾಗಿ ಚರ್ಚಿನ ವ್ಯಾಪ್ತಿಯಲ್ಲಿರುವ ಒಂದು ಬಡ ಕುಟುಂಬಕ್ಕೆ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಲು ಧರ್ಮಗುರು ಡೆನಿಸ್ ಡೆಸಾ ಮನವಿ ಮಾಡಿದರು. ಮನವಿಗೆ ಚರ್ಚಿನ ಸದಸ್ಯರು ಸಹಮತ ವ್ಯಕ್ತಪಡಿಸಿ ಮುಂದಿನ 3 ತಿಂಗಳ ಒಳಗಡೆ ಮನೆಯನ್ನು ನಿರ್ಮಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು.